SK Home Ad
Home ಸುದ್ದಿ ರಾಜ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು, ಮಂಗಳವಾರಕ್ಕೂ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು, ಮಂಗಳವಾರಕ್ಕೂ ವಿಚಾರಣೆ ಮುಂದೂಡಿಕೆ

0
4

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಲು ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆಯಲ್ಲಿ, ಸೋಮವಾರ ಅವರ ಹೇಳಿಕೆಯನ್ನು ನ್ಯಾಯಾಧೀಶರು ಸುಮಾರು ಮೂರು ಗಂಟೆಗಳ ಕಾಲ ದಾಖಲಿಸಿಕೊಂಡರು.

ಮಾಫಿ ಸಾಕ್ಷಿಯಾಗಲು ನ್ಯಾಯಾಲಯದಿಂದ ಹಸಿರು ನಿಶಾನೆ ದೊರೆತ ಬಳಿಕ, 59ನೇ ಸಿಸಿಹೆಚ್‌ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಿತು. ಆದರೆ, ಸಾಕ್ಷಿ ದಾಖಲಾತಿ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಳ್ಳದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಪ್ರದೋಷ್ ಅವರನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳು ಹಾಗೂ ತನಿಖಾ ತಂಡಕ್ಕೆ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.

ಇನ್‌ ಕ್ಯಾಮರಾ ವಿಚಾರಣೆ: ಪ್ರಕರಣ ಅತ್ಯಂತ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಇನ್‌ ಕ್ಯಾಮರಾ ಪ್ರೊಸೀಡಿಂಗ್ಸ್ ನಡೆಸಲು ಆದೇಶಿಸಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದವರು ಕೋರ್ಟ್‌ ಹಾಲ್‌ನಿಂದ ಹೊರಹೋಗುವಂತೆ ನ್ಯಾಯಾಧೀಶರು ಸೂಚಿಸಿದರು.

ಇದೇ ವೇಳೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌ ತೂಗುದೀಪ ಹಾಗೂ ಪವಿತ್ರಾ ಗೌಡ ಅವರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯದ ಕಲಾಪಕ್ಕೆ ಹಾಜರುಪಡಿಸಲಾಯಿತು.

ಮಾಫಿ ಸಾಕ್ಷಿಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ: ಮತ್ತೊಂದೆಡೆ, ಮಾಫಿ ಸಾಕ್ಷಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವುದಕ್ಕೆ ತಡೆ ಕೋರಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಜಿಯನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಿಲ್ಲ.

ಈ ಕುರಿತು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಾಫಿ ಸಾಕ್ಷಿಗೆ ಅವಕಾಶ ನೀಡುವುದನ್ನು ಪ್ರಶ್ನಿಸಿ ಮೊದಲಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆ ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಇದೀಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾಫಿ ಸಾಕ್ಷಿಗೆ ಅವಕಾಶ ನೀಡದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ. ಅರ್ಜಿಗೆ ಸಮ್ಮತಿ ದೊರೆತರೆ ಮಾಫಿ ಸಾಕ್ಷಿಯ ಹೇಳಿಕೆ ಪರಿಗಣನೆಯಿಂದ ಹೊರಗುಳಿಯಲಿದೆ. ಜತೆಗೆ ದರ್ಶನ್ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ಸಿಗಲಿದೆ ಎಂದು ಹಷ್ಮತ್ ಪಾಷಾ ಹೇಳಿದ್ದಾರೆ.