SK Home Ad
Home ಸುದ್ದಿ ರಾಜ್ಯ ಬೆಳಗಾವಿ ಅಧಿವೇಶನ 15 ರಿಂದ 20 ದಿನ ನಡೆಸಿ: ಸಿಎಂಗೆ ಹೊರಟ್ಟಿ ಪತ್ರ

ಬೆಳಗಾವಿ ಅಧಿವೇಶನ 15 ರಿಂದ 20 ದಿನ ನಡೆಸಿ: ಸಿಎಂಗೆ ಹೊರಟ್ಟಿ ಪತ್ರ

0
28
ಬೆಳಗಾವಿ ಅಧಿವೇಶನ ಕನಿಷ್ಠ 15–20 ದಿನ ನಡೆಯಲಿ; ಶನಿವಾರ, ಭಾನುವಾರವೂ ಕಲಾಪಕ್ಕೆ ಹೊರಟ್ಟಿ ಆಗ್ರಹ

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿ; ಚಳಿಗಾಲದ ಅಧಿವೇಶನ ವಿಸ್ತರಿಸಲು ಹೊರಟ್ಟಿ ಪತ್ರ

ಹುಬ್ಬಳ್ಳಿ : ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಕನಿಷ್ಠ 15 ರಿಂದ 20 ದಿನಗಳವರೆಗೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕಳೆದ ಬಾರಿ ಒಟ್ಟು 09 ದಿನಗಳ ಕಾಲ ಮಾತ್ರ ಅಧಿವೇಶನ ನಡೆದಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು 09 ದಿನ ಸಾಲುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ಸಮಸ್ಯೆ, ಬರಗಾಲ, ರೈತರ ಸಮಸ್ಯೆ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಮಸ್ಯೆಗಳು ಸೇರಿದಂತೆ ಇನ್ನೂ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ. ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು 15 ರಿಂದ 20 ದಿನಗಳ ಕಾಲ ಅಧಿವೇಶನ ನಡೆಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಶನಿವಾರದಂದು ಸರ್ಕಾರಿ ಕಾರ್ಯಾಲಯದ ರಜೆಯನ್ನು ರದ್ದುಪಡಿಸಿ, ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಅಧಿವೇಶನದಲ್ಲಿ ಭಾಗವಹಿಸುವಂತೆ ಮಾಡಬೇಕು. ಶನಿವಾರ ಹಾಗೂ ಭಾನುವಾರ ಎರಡು ದಿನಗಳೂ ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವುದು, ಕಳೆದ 9 ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವಲ್ಲಿ ಆಗುತ್ತಿರುವ ವಿಳಂಬ, ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆ, ಪ್ರಾದೇಶಿಕ ಅಸಮತೋಲನ, ಕೃಷಿ ಸಂಕಷ್ಟ, ಪ್ರವಾಹ ಹಾನಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರ, ರೈತರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಧಿವೇಶನವನ್ನು ಹೆಚ್ಚಿನ ದಿನಗಳ ಕಾಲ ನಡೆಸಬೇಕು ಎಂದು ಹೊರಟ್ಟಿ ಅವರು ಮನವಿ ಮಾಡಿದ್ದಾರೆ.