SK Home Ad
Home ಸುದ್ದಿ ರಾಜ್ಯ ವಿಮಾನದ ಶೌಚಾಲಯದಲ್ಲಿ ಸಿಕ್ತು ಹೈಜಾಕ್ ಪತ್ರ: ವಿಮಾನ ತುರ್ತು ಭೂಸ್ಪರ್ಶ

ವಿಮಾನದ ಶೌಚಾಲಯದಲ್ಲಿ ಸಿಕ್ತು ಹೈಜಾಕ್ ಪತ್ರ: ವಿಮಾನ ತುರ್ತು ಭೂಸ್ಪರ್ಶ

0
2

ಬೆಂಗಳೂರು: ಬೆಂಗಳೂರಿನಿಂದ ಲಖನೌಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಅಪಹರಣದ ಬೆದರಿಕೆ ಸಂದೇಶ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲಕಾಲ ಹೈಡ್ರಾಮಾ ಸೃಷ್ಟಿಯಾಯಿತು. ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಶೌಚಾಲಯದಲ್ಲಿ ಬೆದರಿಕೆ ಪತ್ರ ಪತ್ತೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಮತ್ತೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಕರೆಸಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.

ಇಂಡಿಗೊ ಸಂಸ್ಥೆಯ 6ಇ-451 ಸಂಖ್ಯೆಯ ವಿಮಾನ ಶನಿವಾರ ಸಂಜೆ 5.50ಕ್ಕೆ 178 ಪ್ರಯಾಣಿಕರನ್ನು ಹೊತ್ತು ಲಖನೌಗೆ ಪ್ರಯಾಣ ಬೆಳೆಸಿತ್ತು. ವಿಮಾನ ಟೇಕಾಫ್ ಆದ ಬಳಿಕ ಸಿಬ್ಬಂದಿ ಶೌಚಾಲಯ ಪರಿಶೀಲಿಸಿದಾಗ ಕೈಬರಹದ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಸಂಜೆ 6.30ಕ್ಕೆ ವಿಮಾನವನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.

ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ವಿಮಾನ ಸಿಬ್ಬಂದಿ ತಕ್ಷಣ ಪೈಲಟ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ ಪೈಲಟ್, ವಿಮಾನವನ್ನು ಮೂಲ ನಿಲ್ದಾಣವಾದ ಕೆಐಎಎಲ್‌ಗೆ ಮರಳಿಸಿದ್ದಾರೆ.

ವಿಮಾನವನ್ನು ತುರ್ತಾಗಿ ಇಳಿಸುವ ನಿರ್ಧಾರದಿಂದ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯೂ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು.