ಜಾಗತಿಕ ವ್ಯಾಪಾರದಲ್ಲಿ ಭಾರತವೇ ನಂಬಿಕೆಗೆ ಅರ್ಹ ಪಾಲುದಾರ: ‘ಕಟ್ಟಪ್ಪ–ಬಾಹುಬಲಿ’ ಉದಾಹರಣೆ ನೀಡಿ ಪಿಯೂಷ್ ಗೋಯಲ್ ಸಂದೇಶ
ನವದೆಹಲಿ : ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದನು?’ ಎಂಬ ಪ್ರಶ್ನೆ ಒಂದು ಕಾಲದಲ್ಲಿ ಇಡೀ ದೇಶದ ಗಮನ ಸೆಳೆದಿತ್ತು. ಇದೇ ಜನಪ್ರಿಯ ಸಿನಿಮಾ ಸಂಭಾಷಣೆಯನ್ನು ಬಳಸಿಕೊಂಡು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಜಾಗತಿಕ ವ್ಯಾಪಾರದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ವವನ್ನು ಹಂಚಿಕೊಂಡಿದ್ದು, ಒಂದು ಕಾಲದಲ್ಲಿ ದೇಶದ ಜನರು ‘ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದನು?’ ಎಂದು ಪ್ರಶ್ನಿಸುತ್ತಿದ್ದರು. ಆದರೆ ಇಂದಿನ ಜಾಗತಿಕ ವ್ಯಾಪಾರದಲ್ಲಿ ಅಂತರರಾಷ್ಟ್ರೀಯ ಪಾಲುದಾರರು ‘ನಾವು ಯಾರನ್ನು ನಂಬಬಹುದು?’ ಎಂದು ಕೇಳುತ್ತಿದ್ದಾರೆ. ಅದಕ್ಕೆ ಉತ್ತರ, ಭಾರತ ಎಂದು ಹೇಳಿದ್ದಾರೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳುವ, ವಿಶ್ವಾಸಕ್ಕೆ ಧಕ್ಕೆ ತರದ ಮತ್ತು ಪಾಲುದಾರಿಕೆಯಲ್ಲಿ ನಂಬಿಕೆಗೆ ಅರ್ಹವಾದ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂಬ ಸಂದೇಶವನ್ನು ಅವರು ತಮ್ಮ ಸಂದೇಶದ ಮೂಲಕ ನೀಡಿದ್ದಾರೆ. ‘ಎಂದಿಗೂ ಬೆನ್ನಿಗೆ ಇರಿಯದ ಪಾಲುದಾರ’ ಎಂಬ ಮಾತಿನ ಮೂಲಕ ಭಾರತದ ವಿಶ್ವಾಸಾರ್ಹ ವ್ಯಾಪಾರ ಸಂಬಂಧಗಳನ್ನು ಅವರು ಒತ್ತಿಹೇಳಿದ್ದಾರೆ.
ಜಾಗತಿಕ ವ್ಯಾಪಾರದಲ್ಲಿ ಭಾರತದ ವಿಶ್ವಾಸಾರ್ಹತೆಗೆ ಒತ್ತು : ಗೋಯಲ್ ಅವರ ಈ ಹೇಳಿಕೆ ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ವಿವಿಧ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು (FTA) ವಿಸ್ತರಿಸುವುದು, ಭಾರತೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುವುದು ಮತ್ತು ರಫ್ತು ಪ್ರಮಾಣ ಹೆಚ್ಚಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ.
ಸೆಪ್ಟೆಂಬರ್ನಲ್ಲಿ ನಡೆದ ರಾಷ್ಟ್ರೀಯ ಎಫ್ಟಿಎ ಕಾರ್ಯಾಗಾರದಲ್ಲಿ ಮಾತನಾಡಿದ್ದ ಗೋಯಲ್, ಭಾರತವು ಒಂಬತ್ತು ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಸುಮಾರು 60 ಟ್ರಿಲಿಯನ್ ಡಾಲರ್ ಒಟ್ಟು ಆರ್ಥಿಕತೆಯನ್ನು ಹೊಂದಿರುವ ಮಾರುಕಟ್ಟೆಗಳಿಗೆ ಆದ್ಯತೆಯ ಪ್ರವೇಶ ಪಡೆಯುವ ಅವಕಾಶ ಹೊಂದಿದೆ ಎಂದು ತಿಳಿಸಿದ್ದರು. ಮುಂದಿನ ಒಪ್ಪಂದಗಳು ಮತ್ತು ಮಾರುಕಟ್ಟೆ ಪ್ರವೇಶದ ವಿಸ್ತರಣೆಯಿಂದ ಜಾಗತಿಕ ವ್ಯಾಪಾರದ ಸುಮಾರು ಶೇ.75ರಷ್ಟು ಭಾಗಕ್ಕೆ ಸ್ಪರ್ಧಾತ್ಮಕ ಷರತ್ತುಗಳಲ್ಲಿ ಪ್ರವೇಶ ಪಡೆಯುವ ಗುರಿಯನ್ನೂ ಅವರು ಉಲ್ಲೇಖಿಸಿದ್ದರು.
ರಫ್ತು ವೃದ್ಧಿ ಮತ್ತು ವ್ಯಾಪಾರ ಪಾಲುದಾರಿಕೆ : ನವೆಂಬರ್ನಲ್ಲಿ ವಾಣಿಜ್ಯ ಸಚಿವಾಲಯದ ರಫ್ತು ಉತ್ತೇಜನಾ ಮಂಡಳಿಗಳೊಂದಿಗಿನ ಸಭೆಯಲ್ಲಿಯೂ ಭಾರತದ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕಗೊಳಿಸುವ ಅಗತ್ಯವನ್ನು ಗೋಯಲ್ ಪ್ರತಿಪಾದಿಸಿದ್ದರು. ವ್ಯಾಪಾರ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮತ್ತು ಉದ್ಯಮ ವಲಯದ ನಡುವೆ ಸಮನ್ವಯ ಹೆಚ್ಚಿಸುವುದಕ್ಕೂ ಒತ್ತು ನೀಡಿದ್ದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ರಫ್ತನ್ನು ಒಂದು ಟ್ರಿಲಿಯನ್ ಡಾಲರ್ಗೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕಳೆದ ವರ್ಷ ದೇಶದ ಒಟ್ಟು ರಫ್ತು 863 ಬಿಲಿಯನ್ ಡಾಲರ್ ದಾಖಲಿಸಿತ್ತು ಎಂದು ಗೋಯಲ್ ತಿಳಿಸಿದ್ದಾರೆ.
ಆದರೆ ಜಾಗತಿಕ ವ್ಯಾಪಾರದಲ್ಲಿ ವಿಶ್ವಾಸಾರ್ಹತೆ ಎನ್ನುವುದು ಕೇವಲ ಹೇಳಿಕೆಗಳಿಂದ ಸಾಬೀತಾಗುವುದಿಲ್ಲ. ಒಪ್ಪಂದಗಳ ಪಾಲನೆ, ಉತ್ಪನ್ನಗಳ ಗುಣಮಟ್ಟ, ಮೂಲ ದೇಶದ ಪ್ರಮಾಣಪತ್ರಗಳ ವಿಶ್ವಾಸಾರ್ಹತೆ, ಪಾರದರ್ಶಕ ವ್ಯಾಪಾರ ನೀತಿ ಮತ್ತು ಸಮಯಕ್ಕೆ ಸರಿಯಾಗಿ ಸರಕು ಪೂರೈಕೆ ಮಾಡುವ ಸಾಮರ್ಥ್ಯವೂ ಇದಕ್ಕೆ ಮುಖ್ಯವಾಗಿವೆ. ಈ ಅಂಶಗಳ ಮೂಲಕ ಭಾರತವನ್ನು ಜಾಗತಿಕ ಮೌಲ್ಯ ಸರಪಳಿಯಲ್ಲಿ ಪ್ರಮುಖ ಪಾಲುದಾರನನ್ನಾಗಿ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.
‘ಬಾಹುಬಲಿ’ ಚಿತ್ರದ ಜನಪ್ರಿಯ ಸಂಭಾಷಣೆಯನ್ನು ಬಳಸಿಕೊಂಡು ಗೋಯಲ್ ನೀಡಿರುವ ಈ ಸಂದೇಶವು ವ್ಯಾಪಾರ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಜಾಗತಿಕ ಸಮುದಾಯಕ್ಕೆ ಸಾರುವ ಪ್ರಯತ್ನವಾಗಿ ಗಮನ ಸೆಳೆದಿದೆ.
- “ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?”: ಜಾಗತಿಕ ವ್ಯಾಪಾರದಲ್ಲಿ ಮುನ್ನೆಲೆಗೆ ಬಂದ ಬಾಹುಬಲಿ ಡೈಲಾಗ್!
- ಅಫ್ಘಾನಿಸ್ತಾನವನ್ನು ಬಗ್ಗುಬಡಿದು ಫೈನಲ್ಗೆ ಲಗ್ಗೆಯಿಟ್ಟ ಯುವ ಭಾರತ: ಪಾಕಿಸ್ತಾನ ವಿರುದ್ಧ ಮಹಾ ಸೇಡಿನ ಕದನ!
- ದಾಂಡೇಲಿ ಜನರಲ್ ಆಫೀಸ್ ಆವರಣದಲ್ಲಿ ಕರಿ ಚಿರತೆ ಪ್ರತ್ಯಕ್ಷ!
- AI ಮಾನವನ ವಿವೇಚನೆಗೆ ಪರ್ಯಾಯವಾಗಬಾರದು, ಸಾಮರ್ಥ್ಯ ಹೆಚ್ಚಿಸುವ ಸಾಧನವಾಗಬೇಕು
- VAOಪರೀಕ್ಷಾ ಅಕ್ರಮ: ಸುಳ್ಳು ಆರೋಪ ಮಾಡಿದವರ ವಿರುದ್ಧವೂ ಕೇಸ್






















