ಸಿದ್ದಯ್ಯ ಹಿರೇಮಠ
ಬೆಳಗಾವಿ(ಮೋಳೆ): ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ಹಾಗೂ ಮಹಾರಾಷ್ಟ್ರದ ಕಾರ್ಖಾನೆಗಳು 4,200 ರೂ. ದರ ಘೋಷಿಸಿರುವುದರಿಂದ ಕರ್ನಾಟಕದ ರೈತರು ಮಹಾರಾಷ್ಟ್ರದತ್ತ ಮುಖ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತಾಗಿ 3,900ರೂ. ಮೊದಲ ಕಂತು ನೀಡುವುದಾಗಿ ಘೋಷಿಸಿವೆ. ವಿಶೇಷವೆಂದರೆ, ಯಾವುದೇ ಕಡಿತವಿಲ್ಲದೆ ಕಬ್ಬು ಕಾರ್ಖಾನೆಗೆ ತಲುಪಿದ 15 ದಿನಗಳಲ್ಲಿ ಬಿಲ್ ಹಣ ರೈತರ ಖಾತೆಗೆ ಜಮಾ ಮಾಡಲು ಮಹಾರಾಷ್ಟ್ರದ ಕಾರ್ಖಾನೆ ಆಡಳಿತ ಮಂಡಳಿಯು ಸಮ್ಮತಿಸಿರುವುದರಿಂದ, ಕರ್ನಾಟಕದ ಗಡಿಭಾಗದ ಕಬ್ಬು ಈಗ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳತ್ತ ಭರದಿಂದ ಸಾಗಾಟ ನಡೆದಿದೆ. ಇದರಿಂದಾಗಿ ಕರ್ನಾಟಕದ ಗಡಿಭಾಗದ ಸಕ್ಕರೆ ಕಾರ್ಖಾನೆಗಳಿಗೆ ಸಂಕಷ್ಟ ಎದುರಾಗಲಿದೆ.
ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಕಬ್ಬು ಮಹಾರಾಷ್ಟ್ರಕ್ಕೆ ಬರಲು ಅತ್ಯಧಿಕ ಬೆಲೆ ಘೋಷಿಸಿರುವುದರಿಂದ, ಗಡಿಭಾಗದ ಸಕ್ಕರೆ ಕಾರ್ಖಾನೆಗಳ ಮುಂದೆ ದೊಡ್ಡ ಸವಾಲು ಎದುರಾಗಿದೆ. 1993ರ ನಂತರ ಮೊದಲ ಬಾರಿಗೆ ಕಬ್ಬಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೊದಲ ಬಿಲ್ಲು ಘೋಷಣೆಯಾಗಿದೆ ಎಂದು ರೈತ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಮೊದಲ ಬಿಲ್ಲಿನಲ್ಲಿ ಪ್ರತಿ ಟನ್ಗೆ 300 ರೂಪಾಯಿಗಳ ವ್ಯತ್ಯಾಸವಿರುವುದರಿಂದ, ರೈತರು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲು ಆದ್ಯತೆ ನೀಡುತ್ತಿದ್ದಾರೆ.
ಕರ್ನಾಟಕದ ಕಾರ್ಖಾನೆಗಳಿಂದ ಬಿಲ್ ಮೊತ್ತದ ಬಗ್ಗೆ ವ್ಯತ್ಯಾಸ ಇರುವಾಗ, ಮಹಾರಾಷ್ಟ್ರದ ಕಾರ್ಖಾನೆಗಳು ನಗದು ಹಣ ಮತ್ತು ಮುಂಗಡ ಹಣ ನೀಡಲು ಸಿದ್ಧಗೊಂಡಿವೆ. ಆದ್ದರಿಂದ ಯಾವ ಕಾರ್ಖಾನೆಯಿಂದ ಹೆಚ್ಚು ದರ ಮತ್ತು ಸಮಯಕ್ಕೆ ಸರಿಯಾಗಿ ಹಣ ನೀಡುತ್ತಾರೋ ಆ ಕಾರ್ಖಾನೆಗೆ ಕಬ್ಬು ಕಳುಹಿಸುವ ನಿರ್ಧಾರವನ್ನು ರೈತರು ತೆಗೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲು ರೈತರ ಗುಂಪುಗಳು ಹೆಚ್ಚಾಗತೊಡಗಿವೆ.
ಮಹಾರಾಷ್ಟ್ರದ ಕಾರ್ಖಾನೆಗಳು ತಮ್ಮ ಅರೆಯುವ(ಕ್ರಷಿಂಗ್) ಸಾಮರ್ಥ್ಯ ಪೂರ್ಣಗೊಳಿಸಲು ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳೊಂದಿಗೆ ಈಗ ಕರ್ನಾಟಕದ ಅಥಣಿ, ಕಾಗವಾಡ, ರಾಯಬಾಗ ಮತ್ತು ಜಮಖಂಡಿ ತಾಲ್ಲೂಕುಗಳಲ್ಲಿಯೂ ಕಬ್ಬು ಕಟಾವು ಯಂತ್ರೋಪಕರಣ ಸಕ್ರಿಯಗೊಳಿಸಬೇಕಾಗಿದೆ. ಈ ಮಾರ್ಗದಲ್ಲಿ ಮಹಾರಾಷ್ಟ್ರದ ಕಾರ್ಖಾನೆಗಳ ನೌಕರರು ಮತ್ತು ಪ್ರತಿನಿಧಿಗಳು ರೈತರನ್ನು ಸಂಪರ್ಕಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಕರ್ನಾಟಕದ ಕಾರ್ಖಾನೆಗಳ ಮುಂದೆ ಕಬ್ಬಿನ ಲಭ್ಯತೆಯ ಪ್ರಶ್ನೆ ಎದುರಾಗುವ ಸಾಧ್ಯತೆಯಿದೆ.
ಸ್ಥಳೀಯ ಕಾರ್ಖಾನೆಗಳು ಸಹ ಮಹಾರಾಷ್ಟ್ರದಂತೆ ಬೆಲೆ ನೀಡಿ ಸಮಯಕ್ಕೆ ಸರಿಯಾಗಿ ಬಿಲ್ ಮೊತ್ತ ಜಮಾ ಮಾಡದಿದ್ದರೆ, ರೈತರು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸ್ಥಳೀಯ ಕಾರ್ಖಾನೆಗಳು ಸಹ ರೈತರಿಗೆ ಹೆಚ್ಚು ಬೆಲೆ ನೀಡುವುದರ ಜೊತೆಗೆ ಸಮಯಕ್ಕೆ ಸರಿಯಾಗಿ ಹಣ ನೀಡುವ ಸವಾಲು ಎದುರಿಸಬೇಕಾಗುತ್ತದೆ.
1993ರಿಂದ 2001ರ ಅವಧಿಯಲ್ಲಿ ಅಥಣಿ ತಾಲ್ಲೂಕಿನಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇತ್ತು. ಪ್ರಸ್ತುತ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈಗ ಕಾರ್ಖಾನೆಗಳ ಅಧಿಕಾರಿಗಳು ಮತ್ತು ನೌಕರರು ರೈತರ ಮನೆ ಬಾಗಿಲಿಗೆ ತೆರಳಿ ನಗದು ಹಣ ನೀಡುವುದಾಗಿ ಭರವಸೆ ನೀಡಿ ಕಬ್ಬು ಕಟಾವಿಗೆ ವಿನಂತಿಸುತ್ತಿದ್ದಾರೆ. ಹಿಂದೆ ಕಬ್ಬು ಸಾಗಿಸಲು ಕಾರ್ಖಾನೆಗಳ ನಡುವೆ ಪೈಪೋಟಿ ಇತ್ತು. ಈಗ ಕಬ್ಬು ಪಡೆಯಲು ಕಾರ್ಖಾನೆಗಳ ನಡುವೆ ಪೈಪೋಟಿ ಆರಂಭವಾಗಿದೆ.
ಮಹಾರಾಷ್ಟ್ರಕ್ಕೆ ರೈತರ ಒಲವು: ಕರ್ನಾಟಕದ ಗಡಿಭಾಗದಿಂದ ಜತ್ತ, ಡಫಳಾಪುರ, ಸಾಂಗ್ಲಿ, ಆರಗ, ತಾಳಿಕೋಟೆ ಮತ್ತು ಸೋನ್ಹೀರಾ ಭಾಗಗಳಿಂದ ಕಾರ್ಖಾನೆಗಳ ಕಡೆಗೆ ಕಬ್ಬು ಹೋಗತೊಡಗಿದೆ. 1993ರಲ್ಲಿ ಅಥಣಿ ತಾಲ್ಲೂಕಿನ ಕಬ್ಬು ಸಾತಾರಾ ಮತ್ತು ಪುಣೆ ಜಿಲ್ಲೆಗಳವರೆಗೆ ಹೋಗುತ್ತಿತ್ತು. ಆ ಸಮಯದಲ್ಲಿ ದೂರ ಹೆಚ್ಚಿತ್ತು. ಈಗ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳ ಕಾರ್ಖಾನೆಗಳು ಹತ್ತಿರವಿರುವುದರಿಂದ ಮತ್ತು ಬೆಲೆಯೂ ಅಧಿಕ ಸಿಗುತ್ತಿರುವುದರಿಂದ ರೈತರು ಮಹಾರಾಷ್ಟ್ರಕ್ಕೆ ಒಲವು ತೋರುತ್ತಿದ್ದಾರೆ.
ಮೊದಲ ಕಂತಾಗಿ 3,900: ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸುವ ರೈತರಿಗೆ ಮೊದಲ ಕಂತಾಗಿ 3,900, ಎರಡನೇ ಕಂತಾಗಿ 100 ರೂ. ಹಾಗೂ ಕೊನೆಯ ಕಂತಾಗಿ 200 ದರ ನೀಡಲು ಘೋಷಿಸಿವೆ. ಇದರಿಂದ ಕರ್ನಾಟಕದ ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳತ್ತ ಮುಖ ಮಾಡಿದ್ದಾರೆ.




















