SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ ಜನರಲ್ ಆಫೀಸ್ ಆವರಣದಲ್ಲಿ ಕರಿ ಚಿರತೆ ಪ್ರತ್ಯಕ್ಷ!

ದಾಂಡೇಲಿ ಜನರಲ್ ಆಫೀಸ್ ಆವರಣದಲ್ಲಿ ಕರಿ ಚಿರತೆ ಪ್ರತ್ಯಕ್ಷ!

0
3

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ರಾತ್ರಿ ಸಂಚಾರ – ನಗರ ಸುತ್ತಮುತ್ತ ಚಿರತೆ ಓಡಾಟದಿಂದ ಜನರಲ್ಲಿ ಆತಂಕ

ದಾಂಡೇಲಿ (ಉತ್ತರ ಕನ್ನಡ) ಸಂ. ಕ.ಸಮಾಚಾರ: ದಾಂಡೇಲಿ ನಗರದಲ್ಲಿ ಕಳೆದ ಆರು ತಿಂಗಳಿನಿಂದ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಕರಿ ಚಿರತೆಯ ಸಂಚಾರ ಇದೀಗ ಮತ್ತಷ್ಟು ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ದಾಂಡೇಲಿ ಪೇಪರ್ ಮಿಲ್‌ನ ಮುಖ್ಯ ಕಚೇರಿಯಾದ ಜನರಲ್ ಆಫೀಸ್ ಆವರಣದಲ್ಲಿ ಕರಿ ಚಿರತೆ ರಾತ್ರಿ ವೇಳೆ ನಿರಾತಂಕವಾಗಿ ನಡೆದಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ ಆರು ತಿಂಗಳಿನಿಂದ ನಗರದ ವಿವಿಧ ಪ್ರದೇಶಗಳಲ್ಲಿ ಈ ಕರಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ರಾತ್ರಿ ವೇಳೆಯೇ ಹೆಚ್ಚಾಗಿ ಸಂಚರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಇದರ ಓಡಾಟ ಹೆಚ್ಚಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಶೇಷವೆಂದರೆ, ಇದುವರೆಗೂ ಈ ಕರಿ ಚಿರತೆಯಿಂದ ಯಾವುದೇ ವ್ಯಕ್ತಿಯ ಮೇಲೆ ದಾಳಿ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಕರಿ ಚಿರತೆಯ ಓಡಾಟದ ಕುರಿತು ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ಹಾಗೂ ರೋಚಕ ಕಥೆಗಳು ಹರಿದಾಡುತ್ತಿವೆ. ಆದರೆ ಈ ಎಲ್ಲ ಕುತೂಹಲ, ಚರ್ಚೆಗಳಿಗೆ ದೂರವಾಗಿ ಕರಿ ಚಿರತೆ ಮಾತ್ರ ತನ್ನ ಪಾಡಿಗೆ ತಾನು ರಾತ್ರಿ ವೇಳೆ ಗಂಭೀರವಾಗಿ ಹೆಜ್ಜೆ ಹಾಕುತ್ತಾ ಸಂಚರಿಸುತ್ತಿದೆ. ಇದೀಗ ಜನರಲ್ ಆಫೀಸ್ ಆವರಣದಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವು ಕರಿ ಚಿರತೆಯ ಉಪಸ್ಥಿತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡುತ್ತಲೇ ಬಂದಿದೆ. ವಿಶೇಷವಾಗಿ ರಾತ್ರಿ ವೇಳೆ ಅನಗತ್ಯವಾಗಿ ಹೊರಗೆ ಸಂಚರಿಸದಂತೆ, ಒಂಟಿಯಾಗಿ ಓಡಾಡುವುದನ್ನು ತಪ್ಪಿಸುವಂತೆ ಹಾಗೂ ಚಿರತೆ ಕಂಡುಬಂದಲ್ಲಿ ಅದರ ಸಮೀಪ ಹೋಗಲು ಅಥವಾ ಅದನ್ನು ಕೆಣಕಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಒಟ್ಟಿನಲ್ಲಿ, ದಾಂಡೇಲಿಯ ಸುತ್ತಮುತ್ತ ಕರಿ ಚಿರತೆಯ ನಿರಂತರ ಸಂಚಾರ ಸಾರ್ವಜನಿಕರಲ್ಲಿ ಕುತೂಹಲದ ಜೊತೆಗೆ ಎಚ್ಚರಿಕೆಯ ಅಗತ್ಯವನ್ನೂ ಹೆಚ್ಚಿಸಿದ್ದು, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಜಾಗರೂಕತೆ ವಹಿಸುವದು ಅತ್ಯಗತ್ಯವಾಗಿದೆ.