SK Home Ad
Home ಸುದ್ದಿ ರಾಜ್ಯ ‘ಯುವ ಕರ್ನಾಟಕ–ನವ ಭಾರತ’ ಸಂಕಲ್ಪ: ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ

‘ಯುವ ಕರ್ನಾಟಕ–ನವ ಭಾರತ’ ಸಂಕಲ್ಪ: ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ

0
48

ಬೆಂಗಳೂರು: ಭಾರತವನ್ನು ಒಂದು ಭವ್ಯ ದೇಗುಲಕ್ಕೆ ಹೋಲಿಸಿದರೆ ರಾಜ್ಯಗಳು ಅದರ ಭದ್ರ ಬುನಾದಿಯ ಕಂಬಗಳಿದ್ದಂತೆ. ಒಕ್ಕೂಟ ತತ್ವವನ್ನು ಮತ್ತಷ್ಟು ಗಟ್ಟಿಗೊಳಿಸೋಣ. “ಕನ್ನಡ ಕೋಟಿಯ ಕೈಗಳು ನನ್ನ ಜೊತೆ ಕೈ ಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, 7.5 ಕೋಟಿ ಕನ್ನಡಿಗರು ಹಾಗೂ ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಭಾರತವನ್ನು ಭವ್ಯ ದೇಗುಲಕ್ಕೆ ಹೋಲಿಸಿದ ಅವರು, ರಾಜ್ಯಗಳು ಅದರ ಭದ್ರ ಬುನಾದಿಯ ಕಂಬಗಳಿದ್ದಂತೆ. ಒಕ್ಕೂಟ ತತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದರು.

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಡಿ ಕಾಯುವ ಸೈನಿಕರ ತ್ಯಾಗವನ್ನು ಸ್ಮರಿಸಿದ ಶಿವಕುಮಾರ್, ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳ ಆಧಾರದಲ್ಲಿ ಸರ್ವರನ್ನೂ ಒಳಗೊಂಡ ಆಡಳಿತ ನೀಡುವುದು ಸರ್ಕಾರದ ಸಂಕಲ್ಪ ಎಂದರು. ‘ಯುವ ಕರ್ನಾಟಕ–ನವ ಭಾರತ’ ಧ್ಯೇಯದೊಂದಿಗೆ 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು ₹320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಲು ‘ಪ್ರಜಾಸೇವೆ ಇಲಾಖೆ’ ಸ್ಥಾಪಿಸಲಾಗಿದ್ದು, ಸಚಿವರು ಮತ್ತು ಶಾಸಕರಿಂದ ನಿರಂತರ ಪ್ರಜಾಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು. ಪಂಚ ಗ್ಯಾರಂಟಿಗಳ ಜೊತೆಗೆ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕಾಗಿ ‘ಭೂ-ಗ್ಯಾರಂಟಿ’ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ₹77,000 ಕೋಟಿಗೂ ಅಧಿಕ ಮೊತ್ತವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.

ಉದ್ಯೋಗ ಕ್ಷೇತ್ರದಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಆರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ‘ಯುವ ಉದ್ಯೋಗ ಸೇತು’ ಮತ್ತು ಹಿಂದುಳಿದ 10 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ‘ಉದ್ಯೋಗ ನಿಧಿ’ ಯೋಜನೆ ಘೋಷಿಸಿದರು. ಶಿಕ್ಷಣದಲ್ಲಿ 6ನೇ ತರಗತಿಯಿಂದ AI ಶಿಕ್ಷಣ, ಬೆಂಗಳೂರಿನಲ್ಲಿ ಸರ್ಕಾರಿ AI ವಿಶ್ವವಿದ್ಯಾಲಯ ಹಾಗೂ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ.7.5 ಮೀಸಲಾತಿ ಸೇರಿದಂತೆ ಹಲವು ಕ್ರಮಗಳನ್ನು ಪ್ರಕಟಿಸಿದರು.

ರೈತರಿಗಾಗಿ ಡ್ರೋನ್ ಆಧಾರಿತ ಬೆಳೆ ಸಮೀಕ್ಷೆ, ಯಂತ್ರೋಪಕರಣ ಬಾಡಿಗೆಗೆ ಶೇ.50 ಸಬ್ಸಿಡಿ ಸೇರಿದಂತೆ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಜಲಸಂಪನ್ಮೂಲ, ನಗರ ಸಂಚಾರ ಹಾಗೂ ಪರಿಸರ ಸಂರಕ್ಷಣೆಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.