SK Home Ad
Home ಸುದ್ದಿ ದೇಶ ಕೆಂಪುಕೋಟೆಯಿಂದ ಮೋದಿ ವಿಕಸಿತ ಭಾರತಕ್ಕೆ ‘ಸಪ್ತಧಾರೆ’ ಸಂಕಲ್ಪ

ಕೆಂಪುಕೋಟೆಯಿಂದ ಮೋದಿ ವಿಕಸಿತ ಭಾರತಕ್ಕೆ ‘ಸಪ್ತಧಾರೆ’ ಸಂಕಲ್ಪ

0
69

ನವದೆಹಲಿ: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪವನ್ನು ಪುನರುಚ್ಚರಿಸಿದರು. ಸಣ್ಣ ಕನಸುಗಳಿಂದ ಸಾಲದು, ಭಾರತೀಯರು ದೊಡ್ಡ ಕನಸುಗಳನ್ನು ಕಾಣಬೇಕು. 140 ಕೋಟಿ ಜನರ ಶಕ್ತಿ ಮತ್ತು ಸಂಕಲ್ಪದಿಂದ ‘ವಿಕಸಿತ ಭಾರತ’ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಭಾರತದ ಭವಿಷ್ಯದ ಅಭಿವೃದ್ಧಿಗೆ ‘ಸಪ್ತಧಾರೆ’ ಅಥವಾ ಏಳು ಪ್ರಮುಖ ಶಕ್ತಿಗಳ ಕಾರ್ಯತಂತ್ರವನ್ನು ಪ್ರಧಾನಿ ಪ್ರಸ್ತಾಪಿಸಿದರು. ತಂತ್ರಜ್ಞಾನ, ಇಂಧನ, ಕೈಗಾರಿಕೆ, ಯುವಶಕ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೇಗದ ಪ್ರಗತಿಗೆ ಒತ್ತು ನೀಡಿದರು. ಯುವಕರನ್ನು ದೇಶದ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಗುರುತಿಸಿದ ಅವರು, ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳಲ್ಲಿ ಯುವಜನರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಆತ್ಮನಿರ್ಭರ ಭಾರತದ ಮಹತ್ವವನ್ನು ವಿವರಿಸಿದ ಮೋದಿ, ಭಾರತ ಇತರ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಸ್ವದೇಶಿ ಉತ್ಪಾದನೆ, ‘ವೋಕಲ್ ಫಾರ್ ಲೋಕಲ್’ ಹಾಗೂ ತಾಂತ್ರಿಕ ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ದೇಶದ ಭದ್ರತೆ, ಸೆಮಿಕಂಡಕ್ಟರ್ ಉತ್ಪಾದನೆ, ಇಂಧನ ಭದ್ರತೆ ಮತ್ತು ಪರಮಾಣು ಶಕ್ತಿ ವಿಸ್ತರಣೆ ಸೇರಿದಂತೆ ಹಲವು ಕ್ಷೇತ್ರಗಳ ಭವಿಷ್ಯದ ಗುರಿಗಳನ್ನು ಅವರು ಪ್ರಸ್ತಾಪಿಸಿದರು. ಕಳೆದ 12 ವರ್ಷಗಳಲ್ಲಿ ಕೋಟ್ಯಂತರ ಜನರು ಬಡತನದಿಂದ ಹೊರಬಂದಿರುವುದನ್ನು ಉಲ್ಲೇಖಿಸಿ, ಜನರ ನಿರಂತರ ಪ್ರಯತ್ನವನ್ನು ಶ್ಲಾಘಿಸಿದರು.

ಈ ವರ್ಷದ ಸಮಾರಂಭದ ವಿಶೇಷವಾಗಿ ‘ವಂದೇ ಮಾತರಂ’ ಮೊದಲ ಬಾರಿಗೆ ಕೆಂಪುಕೋಟೆ ಕಾರ್ಯಕ್ರಮದಲ್ಲಿ ಮೊಳಗಿದ್ದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಪ್ರಧಾನಿ ಸ್ಮರಿಸಿದರು.