SK Home Ad
Home ಸುದ್ದಿ ರಾಜ್ಯ ಕೇಂದ್ರ ಸರ್ಕಾರವನ್ನೇ ನಡುಗಿಸಿದ ಹುಬ್ಬಳ್ಳಿಯ ಕಬ್ಬು ಬೆಳೆಗಾರರ ಪ್ರತಿಭಟನೆ

ಕೇಂದ್ರ ಸರ್ಕಾರವನ್ನೇ ನಡುಗಿಸಿದ ಹುಬ್ಬಳ್ಳಿಯ ಕಬ್ಬು ಬೆಳೆಗಾರರ ಪ್ರತಿಭಟನೆ

0
10

ಹುಬ್ಬಳ್ಳಿ: ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ ಬೆಲೆ ನಿಗದಿಪಡಿಸಬೇಕು, ಸಕ್ಕರೆಗೆ ಕನಿಷ್ಠ 60 ರೂ. ಎಂಎಸ್‌ಪಿ ನಿಗದಿಪಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ನಗರದಲ್ಲಿ ಸತತ 10 ತಾಸು ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರ ಪ್ರಬಲ ಹೋರಾಟಕ್ಕೆ ಕೇಂದ್ರ ಸರ್ಕಾರವೇ ಮಣಿದಂತಾಗಿದೆ.

ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಅವರು ಶಾಸಕರಾದ ಮಹೇಶ ಟೆಂಗಿನಕಾಯಿ ಮತ್ತು ಎಂ.ಆರ್ ಪಾಟೀಲ ಅವರ ಮೂಲಕ ಕಬ್ಬು ಬೆಳೆಗಾರರ ಹೋರಾಟದ ನಾಯಕತ್ವ ವಹಿಸಿದ್ದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಗೌರವ ಅಧ್ಯಕ್ಷರಾಗಿರುವ ಇಂಚಿಗೇರಿಮಠದ ಸ್ವಾಮೀಜಿ ಶಶಿಕಾಂತ್ ಗುರೂಜಿ ಹಾಗೂ ಸಂಘದ ರಾಜ್ಯ ಅಧ್ಯಕ್ಷ ಚೂನಪ್ಪ ಪೂಜಾರಿ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಅಂತೂ ಸಂಜೆಯೊಳಗೊಂದು ಪರಿಹಾರಕ್ಕೆ ಬಂದ ಪರಿಣಾಮ ಹುಬ್ಬಳ್ಳಿಯಲ್ಲಿ ಆವರಿಸಿದ ಹಸಿರು ಕೋಟೆ ತೆರವು ಕಂಡಿತು.

ಅಕ್ಟೋಬರ್ 10 ರೊಳಗೆ ಕಬ್ಬು ಬೆಳೆಗಾರರ 30 ಮುಖಂಡರೊಂದಿಗೆ ದೆಹಲಿಯಲ್ಲಿ ಕೃಷಿ ಸಚಿವರು, ಕೈಗಾರಿಕಾ ಸಚಿವರು ಸೇರಿದಂತೆ ಪ್ರಮುಖ ಸಚಿವರೊಂದಿಗೆ ಸಭೆ ನಡೆಸೋಣ. ಕಬ್ಬು ಬೆಳೆಗಾರರ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ ಪೂರಕ ತೀರ್ಮಾನ ಮಾಡಲು ಕೇಂದ್ರ ಸರ್ಕಾರವು ಬದ್ಧವಿದೆ. ಅಕ್ಟೋಬರ್ 10 ರೊಳಗಡೆ ಈ ಸಭೆ ನಡೆಸಿದ ಬಳಿಕ ಕಬ್ಬಿನ ಬೆಲೆ ನಿಗದಿ ನಿರ್ಧಾರವನ್ನು ಕೇಂದ್ರ ಮಾಡಲಿದ್ದು, ಅಕ್ಟೋಬರ್ 15ರ ವರೆಗೆ ದೇಶದಲ್ಲಿ ಕಬ್ಬಿನ ಫ್ಯಾಕ್ಟರಿಗಳು ಕಬ್ಬು ನುರಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಅವರು ಹೋರಾಟದ ನಾಯಕತ್ವ ವಹಿಸಿದ ಶಶಿಕಾಂತ್ ಗುರೂಜಿ ಹಾಗೂ ಚೂನಪ್ಪ ಪೂಜಾರಿ ಅವರಿಗೆ ಭರವಸೆ ನೀಡಿದ ನಂತರ ಹಸಿರು ಸೇನೆ ಮುಷ್ಕರ ಕೈ ಬಿಟ್ಟಿತು.

ದೆಹಲಿಯಲ್ಲಿ ಸಭೆ ಏಕೆ?: ಧಾರವಾಡದಲ್ಲಿ ಸಭೆ ನಡೆಸಿ. ನಾವೆಲ್ಲ ದೆಹಲಿಗೆ ಏಕೆ ಬರಬೇಕು. ನೀವೆ ಇಲ್ಲಿ ಸಭೆ ನಡೆಸಿ ಎಂದು ಹೋರಾಟದ ನಾಯಕರು ಸಚಿವರಿಗೆ ಹೇಳಿದಾಗ, ಕರ್ನಾಟಕದಲ್ಲಿ ಈಗ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಭೆ ನಡೆಸಿ ತೀರ್ಮಾನ ಮಾಡಲು, ಘೋಷಣೆ ಮಾಡುವುದು ತಾಂತ್ರಿಕವಾಗಿ ಸೂಕ್ತ ಆಗುವುದಿಲ್ಲ. ಹೀಗಾಗಿ, ತಾವು 30 ಜನರು ದೆಹಲಿಗೆ ಬನ್ನಿ. ಇಲ್ಲಿಯೇ ಸಭೆ ನಡೆಸೋಣ. ತಮ್ಮ ಏನೆಲ್ಲ ಬೇಡಿಕೆಗಳಿವೆಯೋ ಅವುಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ. ಕಬ್ಬು ಬೆಳೆಗಾರರ ಜೊತೆ ನಾನಿದ್ದೇನೆ ಎಂದು ಸಚಿವ ಜೋಶಿ ಭರವಸೆ ನೀಡಿದ ಬಳಿಕ ರೈತ ನಾಯಕರು ಒಪ್ಪಿಗೆ ಸೂಚಿಸಿದರು. ಬಳಿಕ ಇಡೀ ನಡೆದ ಹೋರಾಟವನ್ನು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಿದರು.

ದೆಹಲಿ ಸಭೆ ವಿಫಲವಾದರೆ ಮತ್ತೆ ಹೋರಾಟ: ಕೇಂದ್ರ ಸಚಿವರು ಈಗ ಅಕ್ಟೋಬರ್ 10 ರೊಳಗೆ ದೆಹಲಿಗೆ ಆಹ್ವಾನಿಸಿದ್ದಾರೆ. ಸಭೆ ನಡೆಸಿ ನಿಮ್ಮ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಭರವಸೆ ಮೇಲೆ ಒಪ್ಪಿದ್ದೇವೆ. ಒಂದು ವೇಳೆ ದೆಹಲಿಯಲ್ಲಿ ಸಭೆ ವಿಫಲವಾದರೆ ರಾಜ್ಯದಲ್ಲಿ ಮತ್ತೆ ಕಬ್ಬು ಬೆಳೆಗಾರರ ಹೋರಾಟ ಬೇರೆ ರೀತಿಯದ್ದೇ ಆಗಿರುತ್ತದೆ. ಪ್ರಲ್ಹಾದ ಜೋಶಿಯವರೂ ಹುಬ್ಬಳ್ಳಿಗೆ ಬರುವುದು ಕಷ್ಟವಾಗುತ್ತದೆ ಎಂದು ಶಶಿಕಾಂತ್ ಗುರೂಜಿ, ಚೂನಪ್ಪ ಪೂಜಾರ ಮಾಧ್ಯಮಗಳಿಗೆ ತಿಳಿಸಿದರು.

ದೆಹಲಿಗೆ ಕರೆದೊಯ್ಯುವ ಜವಾಬ್ದಾರಿ ಶಾಸಕರಿಗೆ: ಕಬ್ಬು ಬೆಳೆಗಾರರ ಹೋರಾಟಗಾರರ 30 ಜನರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರು ವಹಿಸಿಕೊಂಡರು. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರೊಂದಿಗೆ ಇದೆ. ಆತಂಕ ಬೇಡ. ನಿಮ್ಮನ್ನು ದೆಹಲಿಗೆ ಕಳಿಸಿಕೊಡುವ ಹೊಣೆ ನನ್ನದು ಎಂದು ಸಮಾಲೋಚನೆ ವೇಳೆ ಹೋರಾಟಗಾರರಿಗೆ ಶಾಸಕ ಎಂ.ಆರ್ ಪಾಟೀಲ ಭರವಸೆ ನೀಡಿದರು.

ಕಬ್ಬು ನುರಿಸುವುದನ್ನು ನಿರ್ಬಂಧಿಸಿ ಆದೇಶ: ಕಬ್ಬು ಬೆಳೆಗಾರರ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ ಪೂರಕ ತೀರ್ಮಾನ ಮಾಡಲು ಕೇಂದ್ರ ಸರ್ಕಾರವು ಬದ್ಧವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಅಕ್ಟೋಬರ್ 10 ರೊಳಗಡೆ ಈ ಸಭೆ ನಡೆಸಿದ ಬಳಿಕ ಕಬ್ಬಿನ ಬೆಲೆ ನಿಗದಿ ನಿರ್ಧಾರವನ್ನು ಕೇಂದ್ರ ಮಾಡಲಿದ್ದು, ಅಕ್ಟೋಬರ್ 15ರ ವರೆಗೆ ದೇಶದಲ್ಲಿ ಕಬ್ಬಿನ ಫ್ಯಾಕ್ಟರಿಗಳು ಕಬ್ಬು ನುರಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.