ಹುಬ್ಬಳ್ಳಿ: ಗಂಡು ಮೆಟ್ಟಿನ ನಾಡು. ಗಂಡು ಮೆಟ್ಟಿದ ನೆಲ. ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಕಬ್ಬು ಬೆಳೆಗಾರರ ಹೋರಾಟವು ಅನ್ನದಾತರ ಆಕ್ರೋಶ ಸರ್ಕಾರಗಳ, ಜನಪ್ರತಿನಿಧಿಗಳ ಎದೆ ನಡುಗಿಸಿತು. ಚನ್ನಮ್ಮ ವೃತ್ತದಲ್ಲಿ ಹಿಂದೆಂದೂ ನಡೆಯದ ರೀತಿ ಪ್ರತಿಭಟನೆ ನಡೆಸಿದ್ದು ಇತಿಹಾಸದ ಪುಟದಲ್ಲಿ ದಾಖಲಾಗುವಂತಾಯಿತು.
ಹಸಿರು ಟವೆಲ್ ಬೀಸುತ್ತ ಸರ್ಕಾರದ ನಡೆ, ಜನಪ್ರತಿನಿಧಿಗಳ ಅಸಡ್ಡೆ ನಿಲವುಗಳ ಬಗ್ಗೆ ಕಠೋರವಾಗಿ ಖಂಡಿಸಿದ ಕಬ್ಬು ಬೆಳೆಗಾರರು ಆಕ್ರೋಶಕ್ಕೆ ಮಿತಿಯೇ ಇರಲಿಲ್ಲ.
ಕಬ್ಬಿಗೆ 5,500 ಬೆಂಬಲ ಬೆಲೆ, ಸಕ್ಕರೆಗೆ ಕನಿಷ್ಠ 60 ದರ ನಿಗದಿ ಹಾಗೂ ಹೊಸ ಎಫ್‌ಆರ್‌ಪಿ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಸಂಪೂರ್ಣ ರೈತನಗರಿಯಾಗಿ ಮಾರ್ಪಡಾಗಿತ್ತು.
ಬೆಳಗ್ಗೆ 10 ಗಂಟೆಯಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಆರಂಭವಾದ ರೈತರ ಪ್ರತಿಭಟನೆ ಬೃಹತ್ ಸ್ವರೂಪ ಪಡೆದು ನಾಲ್ಕು ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು. ಸುಮಾರು 20 ಸಾವಿರಕ್ಕೂ ಹೆಚ್ಚು ರೈತರು ಜನ ಸೇರಿ ರಾತ್ರಿ 7.30 ರವರೆಗೆ ಪ್ರತಿಭಟಿಸಿದರು. ಅಲ್ಲದೇ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕೇಶ್ವಾಪುರದ ರಮೇಶ ಭವನ, ನೆಹರು ಮೈದಾನ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆ ಎದುರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಮಹಾರಾಷ್ಟ್ರ, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಿಂದ ರೈತರು ಹುಬ್ಬಳ್ಳಿಗೆ ಆಗಮಿಸಿದ್ದರು. ಲ್ಯಾಮಿಂಗ್ಟನ್ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕೇಶ್ವಾಪುರ ರಸ್ತೆ, ರಮೇಶ ಭವನ ರಸ್ತೆ, ನಾಗಶೆಟ್ಟಿಕೊಪ್ಪ, ಹೊಸೂರು ವೃತ್ತ ಸೇರಿ ಎಲ್ಲ ಕಡೆ ಹಸಿರು ಟವೆಲ್ ಹೆಗಲಿಗೆ ಹಾಕಿದ ರೈತರಿಂದ ತುಂಬಿತ್ತು.
ನಗರದಲ್ಲಿ ಸಂಚಾರ ಅಸ್ತವ್ಯಸ್ತ: ಹುಬ್ಬಳ್ಳಿಗೆ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಿಂದ 400 ಕ್ಕೂ ಅಧಿಕ ಕ್ರೂಸರ್, ಟ್ರಕ್, ಟೆಂಪೊ, ಬಸ್ ಹಾಗೂ ರೈಲುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಹುಬ್ಬಳ್ಳಿಗೆ ಆಗಮಿಸಿದ್ದರು. ಇದರಿಂದ ಹುಬ್ಬಳ್ಳಿ ಬೆಳಗ್ಗೆ 10 ಗಂಟೆಯಿಂದ ಸಂಚಾರ ಸಂಪೂರ್ಣ ತೊಂದರೆಯಾಗಿತ್ತು. ಹಲವು ವಾಹನಗಳನ್ನು ನಗರದ ಹೊರವಲಯದಲ್ಲೇ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಕೆಲ ರೈತರು ನಡೆದುಕೊಂಡೇ ಪ್ರತಿಭಟನಾ ಸ್ಥಳ ತಲುಪಿದರು.
ಚನ್ನಮ್ಮ ವೃತ್ತ ಸಂಪರ್ಕಿಸುವ ಏಳೂ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡ ಪರಿಣಾಮ ನಗರದಾದ್ಯಂತ ವಾಹನ ದಟ್ಟಣೆ ಉಂಟಾಯಿತು. ಚನ್ನಮ್ಮ ವೃತ್ತ ಹಾಗೂ ನೆಹರು ಮೈದಾನ ರೈತರಿಂದ ತುಂಬಿದ್ದು, ನಗರದಲ್ಲಿ ಹಸಿರು ಶಾಲು ಹೊದ್ದ ರೈತರ ಗುಂಪುಗಳು ಕಂಡುಬಂದವು.
ಊಟ ಉಪಹಾರದ ವ್ಯವಸ್ಥೆ: ಪ್ರತಿಭಟನೆಗೆ ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳಗಾವಿ ಗುರ್ಲಾಪುರ ಗ್ರಾಮದ ರೈತರು ಊಟ, ಉಪಹಾರದ ವ್ಯವಸ್ಥೆಯನ್ನು ನೆಹರು ಮೈದಾನದಲ್ಲಿ ಆಹಾರ ತಯಾರಿಸಿ ರೈತರಿಗೆ ಊಟ ಹಾಕಿಸಲಾಯಿತು. ಬೆಳಗ್ಗೆ ಉಪ್ಪಿಟ್ಟು, ಪಲಾವ್, ಚಹಾ ಹಾಗೂ ಮಧ್ಯಾಹ್ನ ಅನ್ನ ಸಾಂಬಾರು ನೀಡಲಾಯಿತು. 50 ಕ್ವಿಂಟಲ್ ಅಕ್ಕಿ ದಾಸ್ತಾನು ಇದೆ. ರೈತರ ಸಂಖ್ಯೆ ನೋಡಿ ಊಟದ ವ್ಯವಸ್ಥೆ ಮಾಡುತ್ತೇವೆ ಎಂದರು.
ಬಾರಕೋಲ್ ಚಳುವಳಿ: ಕಿತ್ತೂರು ರಾಣಿ ಚನ್ನಮ್ಮ ವೃತ್ತ ಹಾಗೂ ಕೇಶ್ವಾಪುರದ ರಮೇಶ ಭವನದ ಹತ್ತಿರ ಸೇರಿದ ರೈತರು ಬಾರಕೋಲ್ ಚಳುವಳಿ ನಡೆಸಿ ಗಮನ ಸೆಳೆದರು. ತಾವು ತಂದಿದ್ದ ಬಾರಕೋಲ್‌ಗಳನ್ನು ಬೀಸಿ ಸರಕಾರಕ್ಕೆ ಛಾಟಿ ಬೀಸಿದರು. ಇದರ ಜೊತೆಗೆ ಆಗಾಗಾ ಹಸಿರು ಟವೆಲ್ ಬೀಸಿ ಆಕ್ರೋಶ ವ್ಯಕ್ತಪಡಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಡಿಕೆಶಿಗೆ 108 ರೂ. ದಾನ ಮಾಡಿ: ರೈತರು ಮಳೆಯಾಗದೇ ಬರದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರೈತರಿಗೆ ಕೇವಲ 2500 ರೂಪಾಯಿ ಹಾಕುವುದಾಗಿ ಹೇಳಿದ್ದಾರೆ. ರೈತರಿಗೆ ಇದು ಯಾವ ಕಷ್ಟಕ್ಕೂ ಆಗುವುದಿಲ್ಲ. ಹೀಗಾಗಿ ರೈತರೇ ಡಿಕೆಶಿ ಅವರಿಗೆ 108 ರೂ. ಗಳನ್ನು ದಾನದ ರೂಪದಲ್ಲಿ ಕಳುಹಿಸಿ ಕೊಡಿ ಎಂದು ಶಶಿಕಾಂತ್ ಗುರೂಜಿ ಹೇಳಿದರು.
ನಗರದೆಲ್ಲೆಡೆ ಬಂದೋಬಸ್ತ್: ವಾಣಿಜ್ಯನಗರಿಯಲ್ಲಿ ರೈತರ ಪ್ರತಿಭಟನೆಗೆ ನಿರೀಕ್ಷೆಗೂ ಮೀರಿ ರೈತರು ಸೇರಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೈತರನ್ನು ಅಲ್ಲಲ್ಲಿ ಪೊಲೀಸರು ತಡೆದಿದ್ದು ಕೂಡ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆ ಎದುರು ರೈತರು ಬ್ಯಾರಿಕೇಡ್ ಕಿತ್ತು ಧರಣಿ ನಡೆಸಿದರು.





















