ಮುಂಬೈ: ಜಿಯೋ ತನ್ನ 10ನೇ ವಾರ್ಷಿಕೋತ್ಸವದ ಕೊಡುಗೆಯಾಗಿ ಜಿಯೋಭಾರತ್ 4ಜಿ ಫೋನ್ ಅನ್ನು ₹1,499ಕ್ಕೆ ನೀಡುತ್ತಿದ್ದು, ಇದರೊಂದಿಗೆ 6 ತಿಂಗಳ ರಿಚಾರ್ಜ್ ಸಂಪೂರ್ಣವಾಗಿ ಉಚಿತ ಮಾಡಿದೆ.
ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 14ಜಿಬಿ ಡೇಟಾ ಮತ್ತು ಅನಿಯಮಿತ ಎಚ್ಡಿ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ಅಂದರೆ, ಫೋನ್ ಖರೀದಿಸಿದ ತಕ್ಷಣವೇ ಮುಂದಿನ ಆರು ತಿಂಗಳ ರಿಚಾರ್ಜ್ ಚಿಂತೆ ದೂರವಾಗಲಿದ್ದು, ಬೇರೆ ಯಾವುದೇ ರಿಚಾರ್ಜ್ಗಾಗಿ ಹಣ ಖರ್ಚು ಮಾಡುವ ಅಗತ್ಯ ಇರುವುದಿಲ್ಲ.
ಇಂದಿಗೂ 2ಜಿ ಫೀಚರ್ ಫೋನ್ಗಳನ್ನು ಬಳಸುತ್ತಿರುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಕಂಪನಿಯು ಈ ಕೊಡುಗೆಯನ್ನು ವಿಶೇಷವಾಗಿ ಪರಿಚಯಿಸಿದೆ. ಜಿಯೋ ಪ್ರಕಾರ, ಇಂತಹ ಗ್ರಾಹಕರು ಸಾಮಾನ್ಯವಾಗಿ ತಿಂಗಳಿಗೆ ಸುಮಾರು ₹199 ಅನ್ನು ರಿಚಾರ್ಜ್ಗಾಗಿ ಖರ್ಚು ಮಾಡುತ್ತಾರೆ. ಆರು ತಿಂಗಳಿಗೆ ಈ ಮೊತ್ತವು ಸುಮಾರು ₹1,200 ಆಗುತ್ತದೆ.
ಹೀಗಾಗಿ, ₹1,499ಕ್ಕೆ ಫೋನ್ ಮತ್ತು ಆರು ತಿಂಗಳ ರಿಚಾರ್ಜ್ ಎರಡೂ ಲಭ್ಯವಿರುವುದರಿಂದ 2ಜಿಯಿಂದ 4ಜಿ ಬದಲಾಗುವ ನಿವ್ವಳ ಹೆಚ್ಚುವರಿ ವೆಚ್ಚವು ಕೇವಲ ₹299 ಮಾತ್ರ ಆಗುತ್ತದೆ. ಆದರೆ ಗ್ರಾಹಕರು ಫೋನ್ ಖರೀದಿಸುವಾಗ ಸಂಪೂರ್ಣ ₹1,499 ಮೊತ್ತವನ್ನು ಪಾವತಿಸಬೇಕಾಗುತ್ತದೆ.
4ಜಿ ಆಗಿ ಬದಲಾಗುವುದರಿಂದ ಗ್ರಾಹಕರಿಗೆ ಅಲ್ಟ್ರಾ-ಫಾಸ್ಟ್ ಇಂಟರ್ ನೆಟ್ ಸಿಗುವುದಲ್ಲದೆ, ಜಿಯೋಭಾರತ್ನಲ್ಲಿ 500ಕ್ಕೂ ಹೆಚ್ಚು ಟಿವಿ ಚಾನೆಲ್ಗಳಿರುವ ಜಿಯೋಟಿವಿ (JioTV), ಜಿಯೋಹಾಟ್ಸ್ಟಾರ್ನಲ್ಲಿ ಕ್ರಿಕೆಟ್, ಚಲನಚಿತ್ರಗಳು ಮತ್ತು ಮನರಂಜನೆ, ಮ್ಯೂಸಿಕ್ ಹಾಗೂ ಜಿಯೋಪೇ (JioPay) ಮೂಲಕ ಯುಪಿಐ (UPI) ಪಾವತಿಗಳಂತಹ ಸೌಲಭ್ಯಗಳು ಸಹ ಲಭ್ಯವಿರುತ್ತವೆ.
ಈ ಫೋನ್ನಲ್ಲಿ 2.4 ಇಂಚಿನ ಡಿಸ್ಪ್ಲೇ ಮತ್ತು 2000mAh ಬ್ಯಾಟರಿಯನ್ನು ನೀಡಲಾಗಿದೆ. ಈ ಕೊಡುಗೆಯು ಜಿಯೋಭಾರತ್ನ ನಿರ್ದಿಷ್ಟ A1, B1, B2 ಮತ್ತು B3 ಮಾಡೆಲ್ಗಳಿಗೆ ಮಾತ್ರ ಅನ್ವಯಿಸುತ್ತದೆ.






















