SK Home Ad
Home ಸುದ್ದಿ ದೇಶ 100 ವರ್ಷಗಳ UPSC ಪಯಣ: ಅಕ್ಟೋಬರ್ 1ರಂದು ಶತಮಾನೋತ್ಸವ

100 ವರ್ಷಗಳ UPSC ಪಯಣ: ಅಕ್ಟೋಬರ್ 1ರಂದು ಶತಮಾನೋತ್ಸವ

0
53
1926ರಿಂದ 2026ರವರೆಗೆ: UPSC ಶತಮಾನೋತ್ಸವಕ್ಕೆ ಸಜ್ಜು, ಭಾರತ್ ಮಂಟಪದಲ್ಲಿ ವಿಶೇಷ ಕಾರ್ಯಕ್ರಮ

ನವದೆಹಲಿ: ಭಾರತದ ನಾಗರಿಕ ಸೇವಾ ನೇಮಕಾತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೇಂದ್ರ ಲೋಕಸೇವಾ ಆಯೋಗ (UPSC) ಅಕ್ಟೋಬರ್ 1, 2026ರಂದು ತನ್ನ ಶತಮಾನೋತ್ಸವವನ್ನು ಆಚರಿಸಲಿದೆ. 1926ರ ಅಕ್ಟೋಬರ್ 1ರಂದು ಭಾರತದ ಮೊದಲ ಲೋಕಸೇವಾ ಆಯೋಗ ಸ್ಥಾಪನೆಯಾದ ದಿನದಿಂದ ಆರಂಭವಾದ ಸಂಸ್ಥೆಯ ಪಯಣ ಇದೀಗ 100 ವರ್ಷಗಳನ್ನು ಪೂರೈಸುತ್ತಿದೆ.

1926ರಲ್ಲಿ ಸ್ಥಾಪನೆಯಾದ ಮೊದಲ ಲೋಕಸೇವಾ ಆಯೋಗವು ಆರಂಭದಲ್ಲಿ ಸಲಹಾ ಸಂಸ್ಥೆಯಾಗಿ ಕಾರ್ಯನಿರ್ವಹಿಸಿತ್ತು. ಕಾಲಕ್ರಮೇಣ ಅದರ ರಚನೆ, ಸ್ಥಾನಮಾನ ಮತ್ತು ಜವಾಬ್ದಾರಿಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನದ ಅಡಿಯಲ್ಲಿ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ UPSC ರೂಪುಗೊಂಡಿತು. ಸಂವಿಧಾನದ 315ರಿಂದ 323ರವರೆಗಿನ ವಿಧಿಗಳು ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಒಳಗೊಂಡಿವೆ.

ಅಕ್ಟೋಬರ್ 1ರಂದು ಶತಮಾನೋತ್ಸವ ಸಮಾರಂಭ : UPSCಯ ಶತಮಾನೋತ್ಸವದ ಎರಡು ದಿನಗಳ ಕಾರ್ಯಕ್ರಮ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 30ರಂದು ‘ಶತಾಬ್ದಿ ಸಮಾರೋಹ್–ಮಂಥನ್’ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞರ ಭಾಷಣ ಮತ್ತು ಪ್ಯಾನಲ್ ಚರ್ಚೆಗಳು ನಡೆಯಲಿವೆ.

ಅಕ್ಟೋಬರ್ 1ರಂದು ನಡೆಯಲಿರುವ ಮುಖ್ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ವಿವಿಧ ರಾಜ್ಯಗಳ ಲೋಕಸೇವಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಶಿಕ್ಷಣ ತಜ್ಞರು, UPSC ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿ ಬಿಡುಗಡೆ : ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 1ರಂದು UPSC ಶತಮಾನೋತ್ಸವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ ‘100 Landmark Judgements – Shaping the Policies of UPSC and Public Service Commissions in India’ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಆಧುನೀಕರಣದತ್ತ UPSC : ಶತಮಾನೋತ್ಸವ ವರ್ಷದಲ್ಲಿ UPSC ತನ್ನ ಮುಂದಿನ ಹಂತದ ಕಾರ್ಯವಿಧಾನದ ಮೇಲೂ ಗಮನಹರಿಸಿದೆ. 2025ರಲ್ಲಿ ಶತಮಾನೋತ್ಸವ ವರ್ಷದ ಆರಂಭದ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಡಾ. ಅಜಯ್ ಕುಮಾರ್ ಅವರು ಒಳಗೊಳ್ಳುವಿಕೆ, ಡಿಜಿಟಲ್ ಪರಿವರ್ತನೆ ಹಾಗೂ ಯುವಜನರೊಂದಿಗೆ ಹೆಚ್ಚಿನ ಸಂಪರ್ಕಕ್ಕೆ ಒತ್ತು ನೀಡಿದ್ದರು. ‘My UPSC Interview’ ಎಂಬ ಪೋರ್ಟಲ್ ಸೇರಿದಂತೆ ಹಲವು ಉಪಕ್ರಮಗಳನ್ನು ಈ ಅವಧಿಯಲ್ಲಿ ಪರಿಚಯಿಸಲಾಗಿದೆ.

ಒಂದು ಶತಮಾನದ ಅವಧಿಯಲ್ಲಿ ವಸಾಹತು ಕಾಲದ ಸಲಹಾ ಸಂಸ್ಥೆಯಿಂದ ಭಾರತದ ಸಂವಿಧಾನಾತ್ಮಕ ಲೋಕಸೇವಾ ಆಯೋಗವಾಗಿ ರೂಪಾಂತರಗೊಂಡಿರುವ UPSC, ದೇಶದ ಕೇಂದ್ರ ಮಟ್ಟದ ನಾಗರಿಕ ಸೇವೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಿರಂತರವಾಗಿ ಪ್ರಮುಖ ಪಾತ್ರ ವಹಿಸಿಕೊಂಡಿದೆ. ಇದೀಗ 100 ವರ್ಷಗಳ ಪಯಣ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 1ರ ಶತಮಾನೋತ್ಸವ ಕಾರ್ಯಕ್ರಮ ವಿಶೇಷ ಮಹತ್ವ ಪಡೆದುಕೊಂಡಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.