SK Home Ad
Home ಸುದ್ದಿ ರಾಜ್ಯ ನಥಿಂಗ್ ನೈಸ್ : ಡಿಕೆಶಿ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ

ನಥಿಂಗ್ ನೈಸ್ : ಡಿಕೆಶಿ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ

0
4

1995ರಿಂದ 2004ರವರೆಗಿನ ಒಪ್ಪಂದಗಳ ಪ್ರಸ್ತಾಪ; ನೈಸ್‌ ಯೋಜನೆ ಕುರಿತು ಎಚ್‌ಡಿಕೆ ಗಂಭೀರ ಪ್ರಶ್ನೆ

ಬೆಂಗಳೂರು: ನೈಸ್‌ (NICE) ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆಸುತ್ತಿರುವ ರಾಜಕೀಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಮಂಗಳವಾರ ಬೆಂಗಳೂರಿನಲ್ಲಿ ‘ನಥಿಂಗ್ ನೈಸ್’ ಹೆಸರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ನೈಸ್‌ ಯೋಜನೆಯಲ್ಲಿನ ಒಪ್ಪಂದಗಳು, ಭೂಮಿ ಹಂಚಿಕೆ ಹಾಗೂ ಯೋಜನೆಯ ವ್ಯಾಪ್ತಿಯಲ್ಲಿ ಆಗಿರುವ ಬದಲಾವಣೆಗಳ ಕುರಿತು ದಾಖಲೆಗ ಸಹಿತ ಮಾತನಾಡಿದ್ದಾರೆ.

ಯೋಜನೆ ಹೆಸರಿನಲ್ಲಿ ರೈತರ ಬದುಕಿನೊಂದಿಗೆ ಚೆಲ್ಲಾಟ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ನೈಸ್‌ ವಿಚಾರ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದರು. ತಮ್ಮ ಬಳಿ ದಾಖಲೆಗಳಿದ್ದು, ಅವುಗಳ ಆಧಾರದ ಮೇಲೆ ಅಂದಿನ ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ಸುದ್ದಿಗೋಷ್ಠಿ ವಿವರಿಸುತ್ತಾ ಸಾಗಿದರು.

1995ರ MOUನಿಂದ 2002ರ ಒಪ್ಪಂದದವರೆಗೆ ಪ್ರಸ್ತಾಪ : ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ನೈಸ್‌ ಯೋಜನೆಯ ಇತಿಹಾಸವನ್ನು 1995ರಿಂದ ವಿವರಿಸಿದರು. 1995ರ ನವೆಂಬರ್ 8ರಂದು ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್‌ (MOU) ನಡೆದಿದ್ದು, ಬಳಿಕ 1997ರಲ್ಲಿ Framework Agreement ಆಗಿತ್ತು ಎಂದು ಅವರು ಹೇಳಿದರು. ಮೂಲ ಒಪ್ಪಂದದಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯನ್ನು ಯೋಜನೆಗೆ ಬಳಸುವ ಉದ್ದೇಶ ಇರಲಿಲ್ಲ, ಒಣಭೂಮಿಗೆ ಆದ್ಯತೆ ನೀಡಲಾಗಿತ್ತು ಮತ್ತು ಕೆರೆ ಪ್ರದೇಶಗಳನ್ನು ಬಳಸಬಾರದು ಎಂಬ ಅಂಶವೂ ಇತ್ತು ಎಂದು ಅವರು ಪ್ರತಿಪಾದಿಸಿದರು.

ನಂತರ ಯೋಜನೆಯ ವ್ಯಾಪ್ತಿ ಹಾಗೂ ಒಪ್ಪಂದಗಳಲ್ಲಿ ಬದಲಾವಣೆಗಳು ನಡೆದವು ಎಂದು ಆರೋಪಿಸಿದ ಅವರು, 1999ರಲ್ಲಿ ಬಂದ ಪತ್ರ, ನಂದಿ ಎಕಾನಾಮಿಕ್ ಕಾರಿಡಾರ್ ಪರಿಕಲ್ಪನೆ ಹಾಗೂ 2002ರ ತ್ರಿಪಕ್ಷೀಯ ಒಪ್ಪಂದವನ್ನು ತಮ್ಮ ವಾದದ ಭಾಗವಾಗಿ ಪ್ರಸ್ತಾಪಿಸಿದರು.

ಭೂಮಿ ಪ್ರಮಾಣ ಹೆಚ್ಚಳದ ಬಗ್ಗೆ ಪ್ರಶ್ನೆ : 1997ರಲ್ಲಿ ಟೋಲ್ ರಸ್ತೆಗೆ ಸಂಬಂಧಿಸಿದಂತೆ ಸುಮಾರು 6,999 ಎಕರೆ ಭೂಮಿ ಉಲ್ಲೇಖವಾಗಿದ್ದರೆ, 2004ರ ವೇಳೆಗೆ ಈ ಪ್ರಮಾಣ ಸುಮಾರು 9,468.86 ಎಕರೆಗೆ ಏರಿಕೆಯಾಯಿತು ಎಂದು ಕುಮಾರಸ್ವಾಮಿ ಹೇಳಿದರು. ಟೌನ್‌ಶಿಪ್‌ಗೆ ಮೀಸಲಾಗಿದ್ದ ಭೂಮಿಯ ಪ್ರಮಾಣವನ್ನು ಕಡಿಮೆ ಮಾಡಿ ಟೋಲ್‌ ರಸ್ತೆಯ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ ಎಂಬುದು ಅವರ ಆರೋಪ.

ಯೋಜನೆಯ ಮೂಲ ಷರತ್ತುಗಳು ಮತ್ತು ನಂತರದ ಬದಲಾವಣೆಗಳ ನಡುವೆ ವ್ಯತ್ಯಾಸವಿದೆ ಎಂದು ಪ್ರಶ್ನಿಸಿದ ಅವರು, ಸಚಿವ ಸಂಪುಟದ ನಿರ್ಧಾರಗಳಲ್ಲಿ ಬದಲಾವಣೆ ಮಾಡಲು ಯಾರಿಗೆ ಅಧಿಕಾರ ನೀಡಲಾಗಿತ್ತು ಎಂಬ ಪ್ರಶ್ನೆಯನ್ನೂ ಎತ್ತಿದರು.

ಡಿಕೆ ಶಿವಕುಮಾರ್ ನೇತೃತ್ವದ ಸಮಿತಿ ಉಲ್ಲೇಖ : 2003ರಲ್ಲಿ ಡಿ.ಕೆ. ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ನೈಸ್‌ ಯೋಜನೆಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದರು. ಆ ಸಮಿತಿಗೆ ಶಿವಕುಮಾರ್ ಅಧ್ಯಕ್ಷರಾಗಿದ್ದರು ಎಂದು ಹೇಳಿದ ಅವರು, ಸಮಿತಿಯ ರಚನೆ ಮತ್ತು ಅದರ ಮುಂದಿನ ನಿರ್ಧಾರಗಳ ಬಗ್ಗೆಯೂ ಪ್ರಶ್ನೆಗಳನ್ನು ಮುಂದಿಟ್ಟರು.

ಈ ಆರೋಪಗಳ ಕುರಿತು ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ನಿಲುವು ಏನೆಂದರೆ, ಸರ್ಕಾರವು ನೈಸ್‌ ವಿಚಾರದಲ್ಲಿ ಕಾನೂನು ಮತ್ತು ಮೂಲ ಒಪ್ಪಂದದ ಚೌಕಟ್ಟಿನಲ್ಲೇ ಮುಂದುವರಿಯಬೇಕು ಎಂಬುದಾಗಿದೆ. ಟೌನ್‌ಶಿಪ್‌ಗಾಗಿ ನೈಸ್‌ ರಸ್ತೆಯನ್ನು ಸರ್ಕಾರ ವಶಕ್ಕೆ ಪಡೆಯುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದೂ ಅವರು ಇತ್ತೀಚೆಗೆ ಹೇಳಿದ್ದಾರೆ.

ನೈಸ್‌ ವಿವಾದದ ಹಿನ್ನೆಲೆ ಏನು? : ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ (BMIC) ಯೋಜನೆ ಹಲವು ವರ್ಷಗಳಿಂದ ಭೂಸ್ವಾಧೀನ, ಟೋಲ್‌ ಸಂಗ್ರಹ, ಯೋಜನೆಯ ಮೂಲ ಷರತ್ತುಗಳು ಹಾಗೂ ರೈತರಿಗೆ ಸಂಬಂಧಿಸಿದ ವಿಚಾರಗಳಿಂದ ವಿವಾದದಲ್ಲಿದೆ. ಇತ್ತೀಚಿನ ತಿಂಗಳಲ್ಲಿ ಈ ವಿವಾದ ಮತ್ತೆ ರಾಜಕೀಯವಾಗಿ ಮುನ್ನೆಲೆಗೆ ಬಂದಿದೆ. ರಾಜ್ಯ ಸರ್ಕಾರವು BMICPನಿಂದ ಭೂಮಿ ಕಳೆದುಕೊಂಡ ರೈತರಿಗೆ ಸೈಟ್‌ ಹಂಚಿಕೆ ಮಾಡುವ ಕ್ರಮ ಕೈಗೊಂಡಿರುವುದನ್ನು ಎಚ್.ಡಿ. ದೇವೇಗೌಡರೂ ಪ್ರಶ್ನಿಸಿದ್ದರು. ಸುಮಾರು 1,453 ಸೈಟ್‌ಗಳ ಹಂಚಿಕೆ ಕುರಿತು ಅವರು ಸರ್ಕಾರದ ನಿರ್ಧಾರದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದರು.

(ಮಾಹಿತಿ ಅಪ್​ಡೇಟ್ ಆಗಲಿದೆ)

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.