SK Home Ad
Home ಸುದ್ದಿ ರಾಜ್ಯ ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆ: ರೈತರಿಗೆ ದೆಹಲಿಗೆ ಬನ್ನಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ...

ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆ: ರೈತರಿಗೆ ದೆಹಲಿಗೆ ಬನ್ನಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಕ್ತ ಆಹ್ವಾನ

0
5

ನವದೆಹಲಿ: ಕಬ್ಬಿನ ನ್ಯಾಯಯುತ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಇಂದು ಪ್ರತಿಭಟನೆಗೆ ಮುಂದಾಗಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿಗೆ ಬಂದು ಮುಕ್ತ ಚರ್ಚೆ ನಡೆಸುವಂತೆ ಆಹ್ವಾನ ನೀಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಸಚಿವರು, ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ, ನೇರವಾಗಿ ರಾಷ್ಟ್ರ ರಾಜಧಾನಿಗೆ ಬಂದರೆ ಅಧಿಕಾರಿಗಳ ಜೊತೆ ಕೂರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಫೆಬ್ರವರಿಯಲ್ಲಿ ಮನವಿ, ಮೇನಲ್ಲಿ ಬೆಲೆ ಏರಿಕೆ;

2026ರ ಫೆಬ್ರವರಿಯಲ್ಲಿ ರೈತ ಮುಖಂಡರು ತಮ್ಮನ್ನು ಭೇಟಿಯಾಗಿ ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಅದರಂತೆ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ 365 ರೂಪಾಯಿಗೆ ಬೆಲೆಯನ್ನು ಹೆಚ್ಚಿಸಿದೆ. ಆ ನಂತರ ರೈತರಿಂದ ತಮ್ಮನ್ನು ಭೇಟಿ ಮಾಡಲು ಯಾವುದೇ ಮನವಿ ಬಂದಿಲ್ಲ ಎಂದು ಜೋಶಿ ತಿಳಿಸಿದ್ದಾರೆ.

ಬೆಲೆ ನಿಗದಿ ನಿರ್ಧಾರವನ್ನು ಬೆಲೆ ನಿಗದಿ ಸಮಿತಿ ಮತ್ತು ರಾಜ್ಯ ಸರ್ಕಾರದ ಕಬ್ಬು ಆಯುಕ್ತರ ವರದಿ ಹಾಗೂ ಶಿಫಾರಸುಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಾರಿಯೂ ಸೂಕ್ತ ಬೆಲೆ: ಜೋಶಿ ಭರವಸೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ವರ್ಷ ಕಬ್ಬಿನ ಬೆಲೆಯನ್ನು ಹೆಚ್ಚಿಸುತ್ತಾ ಬಂದಿದೆ. ಮೇ ತಿಂಗಳಲ್ಲಷ್ಟೇ 365 ರೂ.ಗೆ ಹೆಚ್ಚಿಸಿ ರೈತರಿಗೆ ನೆರವಾಗಿದೆ. ಈ ಬಾರಿಯೂ ಕಬ್ಬಿಗೆ ಸೂಕ್ತ ಬೆಲೆ ನೀಡಲಾಗುವುದು ಎಂದು ರೈತರಿಗೆ ಸಂದೇಶ ನೀಡಿದ್ದಾರೆ.

ರೈತರ ಹಿತ ಕಾಪಾಡುವುದೇ ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಬ್ಬು ಬೆಳೆಗಾರರ ಹಿತಕ್ಕಾಗಿ ಹಲವು ಪರಿಣಾಮಕಾರಿ ಬದಲಾವಣೆಗಳನ್ನು ತರಲಾಗಿದೆ. ರೈತರಲ್ಲಿ ಯಾವುದೇ ಗೊಂದಲ, ಅನ್ಯ ಭಾವನೆ ಬೇಡ. ಅವರ ಅಹವಾಲುಗಳನ್ನು ಅತ್ಯಂತ ವಿನಮ್ರವಾಗಿ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಆದ್ದರಿಂದ ರೈತ ಮುಖಂಡರು ಮತ್ತು ಹೋರಾಟಗಾರರು ದೆಹಲಿಗೆ ಬಂದು ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.