SK Home Ad
Home ಸಿನಿ ಮಿಲ್ಸ್ ‘ಮದರ್ ಪ್ರಾಮಿಸ್’ ಜುಲೈ 10ಕ್ಕೆ ಬರುತ್ತೇವೆ ಎಂದ ಡಾಲಿ ಟೀಮ್

‘ಮದರ್ ಪ್ರಾಮಿಸ್’ ಜುಲೈ 10ಕ್ಕೆ ಬರುತ್ತೇವೆ ಎಂದ ಡಾಲಿ ಟೀಮ್

0
63

ಹಾಸ್ಯ, ಆಕ್ಷನ್ ಮತ್ತು ಸೆಂಟಿಮೆಂಟ್‌ ಮಿಶ್ರಣ – ಡಾಲಿ ಧನಂಜಯ್ ‘ಮದರ್ ಪ್ರಾಮಿಸ್’ ಚಿತ್ರಕ್ಕೆ ರಿಲೀಸ್ ಡೇಟ್ ಅನೌನ್ಸ್

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ವಿಭಿನ್ನ ಪೋಸ್ಟರ್‌ಗಳು, ಗಮನ ಸೆಳೆದ ಹಾಡುಗಳು ಹಾಗೂ ವಿಶಿಷ್ಟ ಪಾತ್ರಗಳ ಮೂಲಕ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಈ ಸಿನಿಮಾ ಜುಲೈ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡಾಲಿ ಧನಂಜಯ್, “ಡಿಸ್ಟ್ರಿಬ್ಯೂಟರ್ ಲಾಕ್ ಆಗಿದ್ದಾರೆ. ಡೇಟ್ ಫಿಕ್ಸ್ ಆಗಿದೆ. ಹತ್ತಿರದ ಥಿಯೇಟರ್‌ಗಳಲ್ಲಿ ಜುಲೈ 10ರಿಂದ ಆಟ ಶುರು” ಎಂದು ಬರೆದುಕೊಂಡಿದ್ದಾರೆ. ಈ ಘೋಷಣೆಯ ಬಳಿಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ವಿಜಯ್ ಅಬ್ಬರ: ವೈರಲ್ ಆಯ್ತು ‘ಕುಟ್ಟಿ ಕಥೆ’ Video

ಹಾಡುಗಳು ಈಗಾಗಲೇ ಹಿಟ್ : ‘ಮದರ್ ಪ್ರಾಮಿಸ್’ ಚಿತ್ರದ ‘ವೇನಿ ವೀಡಿ ವೀಚಿ’, ‘ನೀನೇ ಬೇಕು ಅಮ್ಮ’ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ರಗಸದಅ’ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇದಲ್ಲದೆ, ಚಿತ್ರದ ಪೋಸ್ಟರ್‌ಗಳೂ ವಿಭಿನ್ನ ವಿನ್ಯಾಸದ ಮೂಲಕ ಸಿನಿಪ್ರಿಯರ ಗಮನ ಸೆಳೆದಿವೆ. ವಿಶೇಷವಾಗಿ ಡಾಲಿ ಧನಂಜಯ್ ಅವರ ಪಾತ್ರದ ಗೆಟಪ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಹಾಸ್ಯಮಯ ಆಕ್ಷನ್ ಕಥೆ : ‘ಮದರ್ ಪ್ರಾಮಿಸ್’ ಚಿತ್ರವು ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ಆಗಿದ್ದು, ಕಥೆಯಲ್ಲಿ ತಾಯಿ-ಮಗನ ಸೆಂಟಿಮೆಂಟ್‌ಗೆ ವಿಶೇಷ ಸ್ಥಾನ ನೀಡಲಾಗಿದೆ ಎನ್ನಲಾಗಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ನಿರ್ದೇಶಕ ಮೈಸೂರು ಪೂರ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಹಾಗೂ ನಟಿ ಗೀತಾ ತಾಯಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ನಟ ಮೈಸೂರು ಪೂರ್ಣ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: IPL ಮಹತ್ವದ ವಹಿವಾಟು: ಪಂತ್-ಕುಲದೀಪ್ ತಂಡ ಬದಲಾವಣೆ

ವಿಚಿತ್ರ ಹೆಸರುಗಳ ಪಾತ್ರಗಳು : ಚಿತ್ರದ ಮತ್ತೊಂದು ವಿಶೇಷವೆಂದರೆ ಅದರಲ್ಲಿರುವ ಪಾತ್ರಗಳ ಹೆಸರುಗಳು. ‘ರೋಸಿ’, ‘ದೊನ್ನೆ ಬಿರಿಯಾನಿ’, ‘ರ್ಯಾಂಡಿ’, ‘ಕ್ಯಾಂಡಿ’, ‘ಮ್ಯಾಗಿ’, ‘7 ಅಪ್’, ‘ಜಿಲೇಬಿ’, ‘ಬ್ಯಾಂಡೆಡ್’ ಸೇರಿದಂತೆ ಹಲವು ವಿಚಿತ್ರ ಮತ್ತು ವಿಭಿನ್ನ ಹೆಸರುಗಳ ಪಾತ್ರಗಳು ಚಿತ್ರದಲ್ಲಿವೆ. ಚಿತ್ರವು ಸೀಮಿತ ಅವಧಿಯಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಬಿಡುಗಡೆಯ ನಂತರವೇ ಚಿತ್ರದ ನೈಜ ಕಥಾಹಂದರ ಬಹಿರಂಗವಾಗಲಿದೆ ಎಂದು ಚಿತ್ರತಂಡ ಹೇಳಿದೆ.

ತಾಂತ್ರಿಕ ಬಳಗ : ‘ಮದರ್ ಪ್ರಾಮಿಸ್’ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ನಿರ್ದೇಶನ ನೀಡಿದ್ದು, ಪ್ರದೀಪ್ ರಾವ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಡಾಲಿ ಧನಂಜಯ್ ಹಾಗೂ ನಟ ಹರ್ಷ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ: ಮಾಜಿ ಅಧ್ಯಕ್ಷನಿಗೆ ಶೂ ಹಾರ, ಮೊಟ್ಟೆ-ಟೊಮೆಟೊ ದಾಳಿ

ಡಾಲಿ ಕೈಯಲ್ಲಿ ಹಲವು ಚಿತ್ರಗಳು : ಇದೀಗ ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಹಲಗಲಿ’, ‘ಉತ್ತರಕಾಂಡ’, ‘ಅಣ್ಣಾ ಫ್ರಂ ಮೆಕ್ಸಿಕೊ’ ಸೇರಿದಂತೆ ಹಲವು ಕನ್ನಡ ಹಾಗೂ ಪರಭಾಷಾ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಜೊತೆಗೆ ನಿರ್ಮಾಪಕರಾಗಿಯೂ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.