ಟೀಸರ್, ಟ್ರೇಲರ್ ಹಳೇ ಟ್ರೆಂಡ್; ಈಗ ಪ್ರೇಕ್ಷಕರ ಕೈಲಿ ಗೇಮ್ ಕೊಟ್ಟ ‘ಹುಬ್ಬಳ್ಳಿ ಹಂಟರ್ಸ್‘ ಚಿತ್ರತಂಡ!
ಹುಬ್ಬಳ್ಳಿ: ಸಿನಿಮಾಗಳ ಪ್ರಚಾರ ಎಂದರೆ ಟೀಸರ್, ಟ್ರೇಲರ್, ಹಾಡುಗಳು ಹಾಗೂ ಪೋಸ್ಟರ್ಗಳಷ್ಟೇ ಎಂಬ ಕಾಲ ಬದಲಾಗುತ್ತಿದೆ. ಪ್ರೇಕ್ಷಕರನ್ನೇ ಸಿನಿಮಾದ ಜಗತ್ತಿನೊಳಗೆ ಕರೆದುಕೊಂಡು ಹೋಗುವ ಹೊಸ ಪ್ರಯೋಗಕ್ಕೆ ಕನ್ನಡ ಚಿತ್ರತಂಡವೊಂದು ಮುಂದಾಗಿದೆ. ಉತ್ತರ ಕರ್ನಾಟಕದ ಸೊಗಡು ಮತ್ತು ಹುಬ್ಬಳ್ಳಿಯ ಸ್ಥಳೀಯ ಬದುಕನ್ನು ಕೇಂದ್ರವಾಗಿಟ್ಟುಕೊಂಡಿರುವ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾ ಇದೀಗ ತನ್ನದೇ ಆದ ಆನ್ಲೈನ್ ವಿಡಿಯೋ ಗೇಮ್ ಮೂಲಕ ಗಮನ ಸೆಳೆಯುತ್ತಿದೆ.
‘ವಿಡಿಯೋ ಗೇಮ್ಗಳನ್ನು ಆಡುತ್ತಾ ಬೆಳೆದ ನಾನು, ಒಂದು ದಿನ ನನ್ನದೇ ಸಿನಿಮಾ ಪಾತ್ರಗಳು ಒಂದರಲ್ಲಿ ಇರುತ್ತವೆ ಎಂದು ಊಹಿಸಿರಲಿಲ್ಲ’ ಎಂಬ ಭಾವನಾತ್ಮಕ ಸಂದೇಶದೊಂದಿಗೆ ಚಿತ್ರತಂಡ ಈ ಆಟವನ್ನು ಪರಿಚಯಿಸಿದೆ. ಬಾಲ್ಯದ ವಿಡಿಯೋ ಗೇಮ್ಗಳ ನಾಸ್ಟಾಲ್ಜಿಯಾ ಹಾಗೂ ಹುಬ್ಬಳ್ಳಿಯ ಮೇಲಿನ ಪ್ರೀತಿಯನ್ನು ಬೆರೆಸಿ ರೂಪಿಸಿರುವ ಈ ಆಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನೀಡಲಾಗುತ್ತಿದೆ.
ಸದ್ಯ ಹುಬ್ಬಳ್ಳಿ ಆವೃತ್ತಿ ಲೈವ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳನ್ನು ಆಟಕ್ಕೆ ಸೇರಿಸುವ ಸುಳಿವನ್ನೂ ಚಿತ್ರತಂಡ ನೀಡಿದೆ. ಯಾವ ನಗರದ ಹಿನ್ನೆಲೆಯ ಆಟ ಬೇಕು ಎಂಬುದನ್ನು ಅಭಿಮಾನಿಗಳಿಂದಲೇ ಕೇಳುತ್ತಿದೆ.
ಆಟದಲ್ಲಿ ಏನೇನಿದೆ? : ‘ಹುಬ್ಬಳ್ಳಿ ಹಂಟರ್ಸ್ ರ್ಯಾಲಿ’ ಎಂಬ ಹೆಸರಿನ ಈ ಆಟವನ್ನು ಮೊಬೈಲ್ ಅಥವಾ ಕಂಪ್ಯೂಟರ್ನ ಬ್ರೌಸರ್ನಲ್ಲೇ ಆಡಬಹುದು. ಆಟಗಾರರು ಸಿನಿಮಾದ ಗ್ಯಾಂಗ್ನಿಂದ ಒಬ್ಬ ಪಾತ್ರವನ್ನು ಆಯ್ಕೆ ಮಾಡಿಕೊಂಡು ಜೀಪ್ ಚಾಲನೆ ಮಾಡಬೇಕು. ದಾರಿಯಲ್ಲಿ ಗಿರ್ಮಿಟ್, ಎಗ್ರೈಸ್ ಸೇರಿದಂತೆ ಸ್ಥಳೀಯ ತಿನಿಸುಗಳನ್ನು ಸಂಗ್ರಹಿಸುತ್ತಾ, ಬೆನ್ನಟ್ಟುವ ಪೊಲೀಸ್ ಪಾಟೀಲರಿಂದ ತಪ್ಪಿಸಿಕೊಂಡು ನಿಗದಿತ ಗುರಿಯಾದ ಅವಾರ್ಡ್ ಕಾರ್ಯಕ್ರಮವನ್ನು ತಲುಪಬೇಕು.
ಧಾರವಾಡದಿಂದ ಆರಂಭವಾಗುವ ಆಟದ ಮಾರ್ಗದಲ್ಲಿ ಉಣಕಲ್ ಕೆರೆ, ಕೆಎಲ್ಇ ಕಾಲೇಜು, ಚನ್ನಮ್ಮ ಸರ್ಕಲ್, ಬಸ್ ನಿಲ್ದಾಣ, ದುರ್ಗದಬೈಲ್, ಹಳೇ ಹುಬ್ಬಳ್ಳಿ, ಗಡಿಯಾರ ಗೋಪುರ, ಸಂಗೊಳ್ಳಿ ರಾಯಣ್ಣ ಹಾಗೂ ಸಿದ್ಧಾರೂಢ ಮಠದಂತಹ ಸ್ಥಳಗಳನ್ನು ಸೇರಿಸಲಾಗಿದೆ. ಹೀಗಾಗಿ ಇದು ಕೇವಲ ರೇಸಿಂಗ್ ಆಟವಲ್ಲ, ಹುಬ್ಬಳ್ಳಿಯ ಪರಿಚಿತ ಸ್ಥಳಗಳು, ಆಹಾರ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಆಟದ ಅನುಭವದ ಭಾಗವಾಗಿಸುವ ಪ್ರಯತ್ನವಾಗಿದೆ.
ಆಟಗಾರರಿಗೆ ಬಹುಮಾನವೂ ಇದೆ : ಆಟದಲ್ಲಿ ಅಂಕಗಳ ಆಧಾರದಲ್ಲಿ ಟಾಪ್ 100 ಆಟಗಾರರ ಲೀಡರ್ಬೋರ್ಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಗ್ರ 10 ಆಟಗಾರರಿಗೆ ಚಿತ್ರದ ಮರ್ಚಂಡೈಸ್ ಮತ್ತು ವಿಶೇಷ ಉಡುಗೊರೆಗಳನ್ನು ನೀಡುವುದಾಗಿ ಅಧಿಕೃತ ಗೇಮ್ ಪುಟ ತಿಳಿಸಿದೆ. ಸ್ಪರ್ಧೆಯು ಡಿಸೆಂಬರ್ 11ರ ರಾತ್ರಿ 11.59ಕ್ಕೆ ಮುಕ್ತಾಯಗೊಳ್ಳಲಿದೆ. ಲೀಡರ್ಬೋರ್ಡ್ಗೆ ಹೆಸರು ನೋಂದಾಯಿಸುವುದು ಐಚ್ಛಿಕವಾಗಿದ್ದು, ಅದಕ್ಕಾಗಿ ಹೆಸರು, ಇ-ಮೇಲ್ ಮತ್ತು ವಾಟ್ಸ್ಆ್ಯಪ್ ಸಂಖ್ಯೆ ನೀಡಬೇಕಾಗುತ್ತದೆ.
ಹುಬ್ಬಳ್ಳಿ ಹಂಟರ್ಸ್ : ಡಿಸೆಂಬರ್ 11ಕ್ಕೆ ಚಿತ್ರಮಂದಿರಗಳಲ್ಲಿ ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಯಾಗಲಿದ್ದು, ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ನಡಿ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಸನ್ನ ಕೇಶವ ಸಂಗೀತ ಸಂಯೋಜಿಸಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ರಿಷಬ್ ಶೆಟ್ಟಿ ಮ್ಯೂಸಿಕ್ ಪಡೆದುಕೊಂಡಿದೆ. ಚಿತ್ರವು ಡಿಸೆಂಬರ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಾಮಾನ್ಯ ಸಿನಿಮಾ ಪ್ರಚಾರದ ಬದಲಿಗೆ ಪ್ರೇಕ್ಷಕರನ್ನು ಆಟದ ಮೂಲಕ ಚಿತ್ರದ ಪಾತ್ರಗಳು, ಸ್ಥಳಗಳು ಮತ್ತು ವಾತಾವರಣದೊಂದಿಗೆ ಸಂಪರ್ಕಿಸುವ ಈ ಪ್ರಯೋಗ ಗಮನಾರ್ಹವಾಗಿದೆ. ವಿಶೇಷವಾಗಿ ಹುಬ್ಬಳ್ಳಿಯ ಸ್ಥಳೀಯ ಗುರುತುಗಳನ್ನು ಡಿಜಿಟಲ್ ಆಟದ ರೂಪದಲ್ಲಿ ಪರಿಚಯಿಸಿರುವುದು ಯುವಜನರಲ್ಲಿ ಕುತೂಹಲ ಮೂಡಿಸಬಹುದು. ಸಿನಿಮಾ ಬಿಡುಗಡೆಯ ಮುನ್ನವೇ ಅಭಿಮಾನಿಗಳಿಗೆ ಒಂದು ರೀತಿಯ ಸಂವಾದಾತ್ಮಕ ಮನರಂಜನೆ ಒದಗಿಸಿರುವುದು ಈ ಪ್ರಚಾರದ ವಿಶೇಷತೆ.
ಆಟ ಆಡಲು: Hubballi Hunters Rally : https://hubballihunters.in/






















