ಬಾಗಲಕೋಟೆ: ವಿದ್ಯುತ್ ತಂತಿ ಹರಿದು ಬಿದ್ದು ಶಾರ್ಟ್ ಸರ್ಕ್ಯೂಟ್ನಿಂದ ಸೋಮನಕೊಪ್ಪ ಗ್ರಾಮದ ಫಕ್ಕೀರಪ್ಪ ಶಿವಪ್ಪ ಮಣ್ಣೂರ ಎಂಬ ರೈತರು ಸುಮಾರು 4 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಳೆಗೆ ಬೆಂಕಿ ಹೊತ್ತಿಕೊಂಡಿದ್ದು 3 ಎಕರೆಯಷ್ಟು ಕಬ್ಬು ಸುಟ್ಟು ಕರಕಲಾಗಿದೆ.
ಸೋಮನಕೊಪ್ಪ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಟಿಸಿ ಹತ್ತಿರ ತಂತಿ ತುಂಡಾಗಿ ಬಿದ್ದು ಈ ಅವಘಡ ಸಂಭವಿಸಿದೆ. ಹೊತ್ತಿದ ಬೆಂಕಿ ನಂದಿಸಲು ನೂರಾರು ರೈತರು ಸತತ ಪ್ರಯತ್ನ ಪಟ್ಟು ಒಂದು ಎಕರೆ ಕಬ್ಬು ಬೆಳೆ ಬೆಂಕಿಯಿಂದ ಕಾಪಾಡಿದರು. ಗಾಳಿಯ ರಭಸಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಲೆ 3 ಎಕರೆಯಷ್ಟು ಸುಟ್ಟು ಭಸ್ಮವಾಯಿತು.
ಪಕ್ಕದಲ್ಲಿರುವ ಮತ್ತೊಬ್ಬ ರೈತ ಮಹಿಳೆ ಮಂಜುಳಾ ಸಿದ್ದಪ್ಪ ಜಂಗನ್ನವರ ಅವರಿಗೆ ಸೇರಿದ ಒಂದು ಎಕರೆ ಮೆಕ್ಕೆ ಜೋಳದ ಬೆಳೆಗೂ ಬೆಂಕಿ ಹೊತ್ತಿಕೊಂಡು ತೆನೆಗಳ ಸಮೇತ ಮೇವು ಸುಟ್ಟು ಭಸ್ಮವಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಬರುವಷ್ಟರಲ್ಲಿ ಕಬ್ಬು ಸುಟ್ಟು ಭಸ್ಮವಾಯಿತು. ಸುಟ್ಟ ಕಬ್ಬಿಗೆ ಅಲ್ಲಲ್ಲಿ ನೀರು ಹಾಕಿ ಬೆಮಕಿ ನಂದಿಸಿ ಮಾಹಿತಿ ಪಡೆದು ವಾಪಾಸ್ಸಾದರು. ಮೇಲಿಂದ ಮೇಲೆ ಶಾರ್ಟ್ ಸರ್ಕ್ಯೂಟ್ನಿಂದ ವಿದ್ಯುತ್ ಅವಘಡ ಸಂಭವಿಸಿ ಈ ಭಾಗದಲ್ಲಿ ನೂರಾರು ಎಕರೆ ಕಬ್ಬು ಸುಟ್ಟು ಭಸ್ಮವಾಗಿವೆ.
ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಈ ನಿರ್ಲಕ್ಷಕ್ಕೆ ರೈತರು ಬಾರಿ ನಷ್ಟ ಅನುಭವಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.






















