SK Home Ad
Home ಸುದ್ದಿ ರಾಜ್ಯ ದೆಹಲಿ ಪ್ರತಿಭಟನೆಗೆ ಗೈರು: ಸಚಿವರ ಪುತ್ರ ಸೇರಿ 6 ಯುವ ಕಾಂಗ್ರೆಸ್ ಪದಾಧಿಕಾರಿಗಳು ಅಮಾನತು

ದೆಹಲಿ ಪ್ರತಿಭಟನೆಗೆ ಗೈರು: ಸಚಿವರ ಪುತ್ರ ಸೇರಿ 6 ಯುವ ಕಾಂಗ್ರೆಸ್ ಪದಾಧಿಕಾರಿಗಳು ಅಮಾನತು

0
26

ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ದೆಹಲಿಯಲ್ಲಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಗೈರುಹಾಜರಾದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನಕುಮಾರ ಲಮಾಣಿ ಸೇರಿದಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಆರು ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಈ ಕುರಿತು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಸಮಿತಿ ಅಮಾನತು ಆದೇಶ ಹೊರಡಿಸಿದೆ. ದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿ ಕೊಂಡ ಎಸ್‌ಐಆರ್ ವಿರೋಧಿ ಹೋರಾಟ, ಸಂಸತ್ ಚಲೋ ಸೇರಿ ವಿವಿಧ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದನ್ನು ಗಂಭೀರ ವಾಗಿ ಪರಿಗಣಿಸಿರುವ ನಾಯಕತ್ವ, ಮುಂದಿನ ಆದೇಶದವರೆಗೆ ಪದಾಧಿಕಾರಿಗಳನ್ನು ಅಮಾನತಿನಲ್ಲಿಡಲು ನಿರ್ಧರಿಸಿದೆ.

ಅಮಾನತಾದವರಲ್ಲಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್, ಸೂರಜ್ ಆವಟಿ, ಪವನ ಸಾಲಿಯಾನ್, ಅಭಿಷೇಕ ಸಿ. ಹಾಗೂ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನಕುಮಾರ ಲಮಾಣಿ ಮತ್ತು ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಸಿರ್ಸಿಕರ ಸೇರಿದ್ದಾರೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್‌ಗೌಡ, ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕೆಪಿವೈಸಿಸಿ ಸಹ ಉಸ್ತುವಾರಿ ತಾರಿಕ್ ಬಾಗ್ವಾನ ಮತ್ತು ಶ್ರೀನಿವಾಸ ರಾಠೋಡ್ ಜಂಟಿಯಾಗಿ ಈ ಅಮಾನತು ಆದೇಶ ಹೊರಡಿಸಿದ್ದಾರೆ.

ಪಕ್ಷ ಕರೆ ನೀಡಿದ ಈ ಸಮಾವೇಶಕ್ಕೆ ಭಾಗಿಯಾಗದ ಹಾಗೂ ಪಕ್ಷದ ನಿಯಮ ಉಲ್ಲಂಘಿಸಿರುವ ಕಾರಣಕ್ಕಾಗಿ ಅಮಾನತು ನಿರ್ಣಯ ಕೈಗೊಳ್ಳಲಾಗಿದೆ. ಇವರು ಜವಾಬ್ದಾರಿಯನ್ನು ಅರಿತು ಕೆಲಸ ಮಾಡಲಿಲ್ಲ. ಇದರಿಂದ ಪಕ್ಷ ಮುಜುಗರಕ್ಕೆ ಒಳಗಾಗಿದೆ. ಇದೇ ಕಾರಣಕ್ಕೆ ಮಧ್ಯಪ್ರದೇಶದಲ್ಲೂ ಸಹ ಸುಮಾರು 60 ಜನ ಪಕ್ಷದ ಯುವ ಘಟಕದ ಪದಾಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.