ಬೆಂಗಳೂರು: ವೀಕ್ಷಕರಿಗೆ ಪ್ರತಿನಿತ್ಯ ಹೊಸತನದ ಕಥೆಗಳನ್ನು ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿ ಇದೀಗ “ಓ ಮನಸೇ” ಎಂಬ ವಿನೂತನ ಶೀರ್ಷಿಕೆಯ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ವಿಭಿನ್ನ ನಂಬಿಕೆ ಹಾಗೂ ಭಿನ್ನ ಮನಸ್ಸುಗಳ ಅಸಾಧ್ಯ ಪ್ರೇಮಕಥೆಯ ಹಂದರ ಹೊಂದಿರುವ ಈ ಧಾರಾವಾಹಿಯು ಇದೇ ನವೆಂಬರ್ 10 ಮಂಗಳವಾರದಿಂದ ಪ್ರತಿದಿನ ರಾತ್ರಿ 8:30ಕ್ಕೆ ಪ್ರಸಾರವಾಗಲಿದೆ.
ಕಥೆಯಲ್ಲಿ ಮೈಸೂರಿನ ಮಧ್ಯಮ ವರ್ಗದ ಶಿಕ್ಷಣ ಪ್ರೇಮಿ ರಾಗಾ ಹಾಗೂ ಶ್ರೀಮಂತ ಕುಟುಂಬದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಿಷಿ ಮುಖಾಮುಖಿಯಾಗಲಿದ್ದಾರೆ. ಸ್ವಾತಂತ್ರ್ಯ ಮತ್ತು ಶಿಕ್ಷಣವೇ ಜೀವ ಎಂದು ನಂಬಿರುವ ನಾಯಕಿ ರಾಗಾಳಿಗೆ ಸ್ವಂತ ತಂದೆಯೇ ತಡೆಗೋಡೆಯಾದರೆ, ಪ್ರೀತಿಯ ಮೇಲೆಯೇ ನಂಬಿಕೆಯಿಲ್ಲದ ನಾಯಕ ರಿಷಿಗೆ ತಾಯಿಯ ಮೇಲೆಯೇ ತೀವ್ರ ಅಸಹನೆ. ಈ ಎರಡು ವಿರುದ್ಧ ದಿಕ್ಕಿನ ವ್ಯಕ್ತಿತ್ವಗಳು ಹಾಗೂ ಹಳೆಯ ಕೌಟುಂಬಿಕ ವೈಮನಸ್ಯಗಳ ನಡುವೆ ಕಥೆ ಹೇಗೆ ಸಾಗಲಿದೆ ಎಂಬುದೇ ‘ಓ ಮನಸೇ’ ಮುಖ್ಯ ತಿರುಳಾಗಿದೆ.
ಧಾರಾವಾಹಿಯಲ್ಲಿ ನಾಯಕ ರಿಷಿ ಪಾತ್ರದಲ್ಲಿ ದರ್ಶಕ್ ಗೌಡ ಹಾಗೂ ನಾಯಕಿ ರಾಗಾ ಪಾತ್ರದಲ್ಲಿ ಮಧುಮಿತಾ ಗೌಡ ಅಭಿನಯಿಸುತ್ತಿದ್ದಾರೆ. ಜೊತೆಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಗಣಪತಿ ಭಟ್ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಬಿ. ಮಧುಸೂದನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಹೊಸ ಧಾರಾವಾಹಿ ಆಗಮನದಿಂದ ವಾಹಿನಿಯ ಜನಪ್ರಿಯ “ವಸುದೇವ ಕುಟುಂಬ” ಧಾರಾವಾಹಿಯು ನವೆಂಬರ್ 10 ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.






















