SK Home Ad
Home ನಮ್ಮ ಜಿಲ್ಲೆ ಮರಾಠಿ ಫಲಕ ಇಲ್ಲದ ಅಂಗಡಿಗಳಲ್ಲಿ ವ್ಯಾಪಾರ ಬೇಡ: ಶೇಳಕೆ ಬಹಿರಂಗ ಕರೆ

ಮರಾಠಿ ಫಲಕ ಇಲ್ಲದ ಅಂಗಡಿಗಳಲ್ಲಿ ವ್ಯಾಪಾರ ಬೇಡ: ಶೇಳಕೆ ಬಹಿರಂಗ ಕರೆ

0
45

ಬೆಳಗಾವಿ: ಅಂಗಡಿಗಳ ನಾಮಫಲಕದಲ್ಲಿ ಮರಾಠಿ ಭಾಷೆಗೆ ಸ್ಥಾನ ನೀಡದ ವ್ಯಾಪಾರಿಗಳೊಂದಿಗೆ ಮರಾಠಿ ಭಾಷಿಕರು ಯಾವುದೇ ವಹಿವಾಟು ನಡೆಸಬಾರದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ಶುಭಂ ಶೇಳಕೆ ಬಹಿರಂಗ ಕರೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮರಾಠಿ ಭಾಷೆಗೆ ಗೌರವ ನೀಡುವ ಕನ್ನಡಿಗ ನಮ್ಮ ಸಹೋದರ. ಅಂಥವರ ಅಂಗಡಿಗಳಲ್ಲಿ ಮರಾಠಿ ಭಾಷಿಕರು ವ್ಯಾಪಾರ ಮಾಡಬೇಕು. ಆದರೆ, ತಮ್ಮ ನಾಮಫಲಕದಲ್ಲಿ ಮರಾಠಿಗೆ ಸ್ಥಾನ ನೀಡದ ವ್ಯಾಪಾರಿಗಳ ಅಂಗಡಿಗಳಲ್ಲಿ ಯಾವುದೇ ವಸ್ತು ಖರೀದಿಸಬಾರದು ಎಂದು ಶೇಳಕೆ ವಿಡಿಯೊದಲ್ಲಿ ಹೇಳಿದ್ದಾರೆ.

ಮರಾಠಿ ವ್ಯಾಪಾರಿಗಳನ್ನೂ ಗುರಿಯಾಗಿಸಿಕೊಂಡು ಮಾತನಾಡಿರುವ ಅವರು, `ಮರಾಠಿಗೆ ಎರಡನೇ ದರ್ಜೆಯ ಸ್ಥಾನ ನೀಡುವ ಮರಾಠಿ ವ್ಯಾಪಾರಿಗಳೊಂದಿಗೂ ವಹಿವಾಟು ನಡೆಸಬಾರದು. ಪ್ರತಿಯೊಬ್ಬರೂ ಈ ನಿರ್ಧಾರ ತಮ್ಮಿಂದಲೇ ಆರಂಭಿಸಿದರೆ ಬದಲಾವಣೆ ತರಲು ಸಾಧ್ಯ’ ಎಂದಿದ್ದಾರೆ.

ವ್ಯಾಪಾರ ನಷ್ಟವಾದಾಗ ತಮ್ಮ ತಪ್ಪಿನ ಅರಿವಾಗಿ, ವ್ಯಾಪಾರಿಗಳು ನಾಮಫಲಕದಲ್ಲಿ ಮರಾಠಿ ಭಾಷೆಗೆ ಸ್ಥಾನ ನೀಡುತ್ತಾರೆ. ಎಲ್ಲ ಫಲಕಗಳಲ್ಲೂ ಮರಾಠಿ ಕಾಣುವವರೆಗೂ ಈ ನಿಲುವು ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆಡಳಿತಾತ್ಮಕ ಮತ್ತು ಕಾನೂನಾತ್ಮಕವಾಗಿ ಆದ್ಯತೆ ನೀಡಲಾಗುತ್ತಿರುವ ಸಂದರ್ಭದಲ್ಲಿ, ಮರಾಠಿ ನಾಮಫಲಕದ ಹೆಸರಿನಲ್ಲಿ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.