ಅಯೋಧ್ಯೆ: ಹತ್ತನೇ ವರ್ಷದ ದೀಪೋತ್ಸವದ ಸಂಭ್ರಮಕ್ಕೆ ರಾಮಜನ್ಮಭೂಮಿ ಅಯೋಧ್ಯೆ ಶನಿವಾರ ಅಕ್ಷರಶಃ ಬೆಳಕಿನ ಸಾಗರವಾಗಿ ಕಂಗೊಳಿಸಿತು. ಸರಯೂ ನದಿ ತೀರ ಹಾಗೂ ರಾಮ್ ಕಿ ಪೈಡಿ ಉದ್ದಕ್ಕೂ ಇರುವ 56 ಘಾಟ್ಗಳಲ್ಲಿ 30 ಲಕ್ಷಕ್ಕೂ ಅಧಿಕ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಭವ್ಯ ದೀಪೋತ್ಸವ ಆಚರಿಸಲಾಯಿತು. ರಾಮಜನ್ಮಭೂಮಿ ದೇವಾಲಯದ ಆವರಣದಲ್ಲೂ ಒಂದು ಲಕ್ಷ ಹಣತೆಗಳು ಜಗಮಗಿಸಿ ಭಕ್ತರ ಕಣ್ಮನ ಸೆಳೆದವು.
ರಾವಣನನ್ನು ಸಂಹರಿಸಿ ಭಗವಾನ್ ಶ್ರೀರಾಮ ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ನಗರದ ಜನರು ದೀಪಗಳನ್ನು ಬೆಳಗಿಸಿ ಸಂಭ್ರಮದಿಂದ ಸ್ವಾಗತಿಸಿದ ಐತಿಹಾಸಿಕ ಕ್ಷಣದ ಸ್ಮರಣಾರ್ಥ ದೀಪೋತ್ಸವ ಆಚರಿಸಲಾಗುತ್ತದೆ. ಈ ಸಂಪ್ರದಾಯಕ್ಕೆ ಮತ್ತಷ್ಟು ವೈಭವ ತುಂಬಿದ ಕಾರ್ಯಕ್ರಮದಲ್ಲಿ ಸುಮಾರು 35 ಸಾವಿರ ಸ್ವಯಂಸೇವಕರು ದೀಪಗಳನ್ನು ಬೆಳಗಿಸುವ ಕಾರ್ಯದಲ್ಲಿ ಕೈಜೋಡಿಸಿದರು.
ವರ್ಣರಂಜಿತ ದೀಪೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಸಾವಿರಾರು ಸಂತರು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.
ರಾಮಕಥಾ ಪಾರ್ಕ್ನಲ್ಲಿ ಆಯೋಜಿಸಿದ್ದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಮಜನ್ಮಭೂಮಿ ಚಳವಳಿಗಾಗಿ ನಡೆದ ಸುದೀರ್ಘ ಹೋರಾಟ ಹಾಗೂ ಕರಸೇವಕರು, ಸಂತರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು. ಇಂದಿನ ದೀಪೋತ್ಸವವು ಅಯೋಧ್ಯೆಯಲ್ಲಿ ಆಗಿರುವ ಮಹತ್ವದ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯ ಅಭಿವೃದ್ಧಿಗೆ ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದಲ್ಲಿ ಅಭಿವೃದ್ಧಿಪಡಿಸಿರುವ ಆಧುನಿಕ ಮೂಲಸೌಕರ್ಯಗಳು ಅಯೋಧ್ಯೆಯ ಹೊಸ ರೂಪಾಂತರಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಿದ್ದ ಹತ್ತನೇ ವರ್ಷದ ದೀಪೋತ್ಸವದಲ್ಲಿ ಲಕ್ಷಾಂತರ ಹಣತೆಗಳ ಬೆಳಕು ಅಯೋಧ್ಯೆಯ ಆಕಾಶ ಹಾಗೂ ಸರಯೂ ನದಿ ತೀರವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಿತು.






















