ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ದೇಶದಾದ್ಯಂತ ಹಾಗೂ ವಿದೇಶಗಳಲ್ಲೂ ನಡೆಸಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET UG) 2026ರ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಗೆ ಮಹತ್ವದ ಆಧಾರವಾಗಿರುವ ಈ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
15.68 ಲಕ್ಷ ನೋಂದಣಿ – 11.64 ಲಕ್ಷ ಅಭ್ಯರ್ಥಿಗಳು ಹಾಜರು: ಈ ವರ್ಷದ CUET UG ಪರೀಕ್ಷೆಗೆ ಒಟ್ಟು 15.68 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 11.64 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಹಾಜರಾದವರಲ್ಲಿ 5.85 ಲಕ್ಷ ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಪರೀಕ್ಷೆಯನ್ನು ಮೇ 11ರಿಂದ ಮೇ 31ರವರೆಗೆ ಹಾಗೂ ಜೂನ್ 6 ಮತ್ತು 7ರಂದು ನಡೆಸಲಾಗಿತ್ತು. ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿನ ಒಟ್ಟು 321 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಇದನ್ನೂ ಓದಿ: ಮೋದಿ ಸಂಪುಟಕ್ಕೆ ವಿದಾಯ ಹೇಳಿದ ಜಾರ್ಜ್: ರಾಜೀನಾಮೆ ಅಂಗೀಕಾರ
3,214 ಅಭ್ಯರ್ಥಿಗಳಿಗೆ 100 ಪರ್ಸೆಂಟೈಲ್: ಫಲಿತಾಂಶಗಳ ಪ್ರಕಾರ, ವಿವಿಧ ವಿಷಯಗಳಲ್ಲಿ ಒಟ್ಟು 3,214 ಅಭ್ಯರ್ಥಿಗಳು 100 ಪರ್ಸೆಂಟೈಲ್ ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದು ಪರೀಕ್ಷೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪರ್ಸೆಂಟೈಲ್ (Percentile) ಎಂದರೇನು?: ಅಂಕಗಳನ್ನು ಉಳಿದ ವಿದ್ಯಾರ್ಥಿಗಳ ಅಂಕಗಳೊಂದಿಗೆ ಹೋಲಿಸಿ ನೋಡುವ ವಿಧಾನವಾಗಿದೆ. ಅಂದರೆ, ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಎಷ್ಟು ಶೇಕಡಾ ವಿದ್ಯಾರ್ಥಿಗಳು ನಿಮಗಿಂತ ಕಡಿಮೆ ಅಥವಾ ನಿಮ್ಮಷ್ಟೇ ಅಂಕ ಗಳಿಸಿದ್ದಾರೆ ಎಂಬುದನ್ನು ಇದು ತಿಳಿಸುತ್ತದೆ. ಇದು ನಿಮ್ಮ ಸ್ಥಾನ ಅಥವಾ ರಾಂಕ್ ಅನ್ನು ನಿರ್ಧರಿಸುತ್ತದೆ.
ಉದಾಹರಣೆಗೆ: ಒಂದು ಪರೀಕ್ಷೆಯನ್ನು ಒಟ್ಟು 100 ಜನ ಬರೆದಿದ್ದಾರೆ ಎಂದು ಕೊಳ್ಳೋಣ. ಅದರಲ್ಲಿ ನಿಮ್ಮ ರಾಂಕ್ 1 (ಅಂದರೆ ನೀವೇ ಟಾಪರ್) ಆಗಿದ್ದರೆ, ಉಳಿದ 99 ಜನ ನಿಮಗಿಂತ ಕಡಿಮೆ ಅಂಕ ಪಡೆದಿದ್ದಾರೆ ಎಂದರ್ಥ. ಆಗ ನಿಮ್ಮ ಸ್ಕೋರ್ 99 ಪರ್ಸೆಂಟೈಲ್ ಆಗುತ್ತದೆ. ಒಂದು ವೇಳೆ ನಿಮ್ಮದು 90 ಪರ್ಸೆಂಟೈಲ್ ಬಂದರೆ, ಪರೀಕ್ಷೆ ಬರೆದವರಲ್ಲಿ 90% ವಿದ್ಯಾರ್ಥಿಗಳು ನಿಮಗಿಂತ ಹಿಂದೆ ಇದ್ದಾರೆ ಮತ್ತು ಕೇವಲ 10% ವಿದ್ಯಾರ್ಥಿಗಳು ಮಾತ್ರ ನಿಮಗಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದರ್ಥ.
ಇದನ್ನೂ ಓದಿ: ಭ್ರಷ್ಟಾಚಾರ: ಮಾಜಿ ಅಧ್ಯಕ್ಷನಿಗೆ ಶೂ ಹಾರ, ಮೊಟ್ಟೆ-ಟೊಮೆಟೊ ದಾಳಿ
ಐದು ವಿಷಯಗಳಲ್ಲಿ ಗರಿಷ್ಠ ಒಟ್ಟು ಅಂಕ 1232.19 : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಐದು ವಿಷಯಗಳಲ್ಲಿ ಒಟ್ಟು ಗರಿಷ್ಠ ಸಾಮಾನ್ಯೀಕೃತ (Normalized) ಅಂಕ 1232.19 ದಾಖಲಾಗಿದೆ. ವಿವಿಧ ಶಿಫ್ಟ್‌ಗಳಲ್ಲಿ ನಡೆದ ಪರೀಕ್ಷೆಗಳ ಅಂಕಗಳನ್ನು ಸಮನ್ವಯಗೊಳಿಸಲು ಎನ್‌ಟಿಎ ಸಾಮಾನ್ಯೀಕರಣ ವಿಧಾನವನ್ನು ಅನುಸರಿಸಿದೆ.
ಶೀಘ್ರದಲ್ಲೇ ಕೌನ್ಸೆಲಿಂಗ್ ಪ್ರಕ್ರಿಯೆ : ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೆಹಲಿ ವಿಶ್ವವಿದ್ಯಾಲಯ (DU) ಸೇರಿದಂತೆ ದೇಶದ ಹಲವು ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯಗಳು ಪ್ರವೇಶ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಿವೆ. ವಿಶ್ವವಿದ್ಯಾಲಯಗಳು ಎನ್‌ಟಿಎ ನೀಡಿರುವ ಸಾಮಾನ್ಯೀಕೃತ ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಿವೆ. ಪ್ರತಿಯೊಂದು ವಿಶ್ವವಿದ್ಯಾಲಯವು ತನ್ನದೇ ಆದ ಅರ್ಹತಾ ಮಾನದಂಡ ಮತ್ತು ಕಟ್‌ಆಫ್ ಪಟ್ಟಿಯನ್ನು ಪ್ರಕಟಿಸಲಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ವಿಜಯ್ ಅಬ್ಬರ: ವೈರಲ್ ಆಯ್ತು ‘ಕುಟ್ಟಿ ಕಥೆ’ Video
2026-27 ಶೈಕ್ಷಣಿಕ ಸಾಲಿಗೆ ಮಾತ್ರ ಮಾನ್ಯ : ಎನ್‌ಟಿಎ ಸ್ಪಷ್ಟಪಡಿಸಿರುವಂತೆ, ಈ ಫಲಿತಾಂಶಗಳು 2026-27 ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಗೆ ಮಾತ್ರ ಮಾನ್ಯವಾಗಿರುತ್ತವೆ. ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅಭ್ಯರ್ಥಿಗಳು ಹೊಸದಾಗಿ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.
ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ : ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ನೆರವಿನಿಂದ ಎನ್‌ಟಿಎಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪರಿಶೀಲಿಸಬಹುದು. ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭೇಟಿ ನೀಡುತ್ತಿರುವುದರಿಂದ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



















