BBK13: ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮಿಬ್ಬರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಎಲ್ಲಾ ವದಂತಿಗಳು ಹಾಗೂ ಟ್ರೋಲ್ಗಳಿಗೆ ತೆರೆಎಳೆದಿರುವ ಈ ಜೋಡಿ, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹಸಮಣೆ ಏರುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕರ್ಷಕ ವಿಡಿಯೋ ಹಂಚಿಕೊಂಡಿರುವ ಜೋಡಿ, “ಊಹೆಗಳ ಹಿಂದೆ ಒಂದು ಕಥೆಯಿತ್ತು, ನಗುವಿನ ಹಿಂದೆ ಪ್ರೀತಿಯಿತ್ತು. ಇಂದು ಆ ಕಥೆಗೆ ‘AISHIR’ (ಐಶಿರ್) ಎಂಬ ಸುಂದರ ಹೆಸರಿದೆ. ಇದು ವದಂತಿಯಲ್ಲ, ನಮ್ಮ ಹೊಸ ಜೀವನದ ಆರಂಭ” ಎಂದು ತಿಳಿಸಿದ್ದಾರೆ. ಹಿಂದೆ ಶಿಶಿರ್ ಅವರು ಐಶ್ವರ್ಯಾರನ್ನು ‘ತಂಗಿ’ ಎಂದು ಕರೆದಿದ್ದ ವಿಡಿಯೋ ವೈರಲ್ ಆಗಿದ್ದರ ಬಗ್ಗೆ ಸ್ಪಷ್ಟನೆ ನೀಡಿ, ಆ ಸಂದರ್ಶನದಲ್ಲಿ ತಮಾಷೆಗಾಗಿ ಹಾಗೆ ಹೇಳಲಾಗಿತ್ತು ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ತಾವು ಅಣ್ಣ-ತಂಗಿ ಅಥವಾ ಕೇವಲ ವದಂತಿಗಳ ಸುತ್ತಿಲ್ಲದೆ, ಜೀವನದ ಹಡಗನ್ನು ಒಟ್ಟಿಗೆ ಏರುತ್ತಿದ್ದೇವೆ ಎಂದು ಜೋಡಿ ಸ್ಪಷ್ಟಪಡಿಸಿದೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಂತ್ಯಹಾಡಿರುವ ಬಿಗ್ ಬಾಸ್ ಜೋಡಿಯ ಮದುವೆ ಸುದ್ದಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ.






















