ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಸಂ.ಕ.ಸಮಾಚಾರ ಕಲಬುರಗಿ: ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪೊಕ್ಸೊ ಪ್ರಕರಣದ ತನಿಖೆ ನಡೆಸುವ ನೆಪದಲ್ಲಿ ಸಂತ್ರಸ್ತೆಯ ಕುಟುಂಬದಿಂದ ಲಂಚಕ್ಕೆ ಬೇಡಿಕೆಯಿಟ್ಟು ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡಿರುವವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಶಿವಶರಣಪ್ಪ ಹಾಗೂ ಮಹಿಳಾ ಪೊಲೀಸ್ ಮುಖ್ಯ ಪೇದೆ ಜ್ಯೋತಿ. ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಲೋಪ, ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಇಲಾಖಾ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: IIIT ಧಾರವಾಡ ಸಾಧನೆ: ಸಿಲಿಕಾನ್ ಚಿಪ್‌ಗೆ ಸಿದ್ಧಾರೂಢರ ಹೆಸರು
ಏನಿದು ಪ್ರಕರಣ? : ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಹಾಗೂ ಸಂತ್ರಸ್ತೆಯ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಸಂತ್ರಸ್ತೆಯ ತಾಯಿಯ ಬಳಿ ಎಎಸ್‌ಐ ಶಿವಶರಣಪ್ಪ ಮತ್ತು ಮಹಿಳಾ ಮುಖ್ಯ ಪೇದೆ ಜ್ಯೋತಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಪ್ರಕರಣದ ತನಿಖೆ ಸುಗಮವಾಗಿ ನಡೆಸುವುದು ಹಾಗೂ ಅಗತ್ಯ ದಾಖಲೆಗಳ ಪ್ರಕ್ರಿಯೆ ಪೂರ್ಣಗೊಳಿಸುವ ನೆಪದಲ್ಲಿ ₹10 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಬಳಿಕ ಮಾತುಕತೆಯ ನಂತರ ₹9 ಸಾವಿರಕ್ಕೆ ಒಪ್ಪಂದವಾಗಿದ್ದು, ಹಣ ಸ್ವೀಕರಿಸುವ ವೇಳೆ ಇಬ್ಬರೂ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.
ಇದನ್ನೂ ಓದಿ: ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜಾ ನಿಧನ
ಲೋಕಾಯುಕ್ತ ದಾಳಿ : ಸಂತ್ರಸ್ತೆಯ ಕುಟುಂಬವು ಲಂಚದ ಬೇಡಿಕೆ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿತ್ತು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ರೂಪಿಸಿದ ಲೋಕಾಯುಕ್ತ ಪೊಲೀಸರು ಜೂನ್ 7ರಂದು ಬಲೆ ಬೀಸಿ, ಹಣ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಸಿಬ್ಬಂದಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು.
ಆಯುಕ್ತರಿಂದ ಅಮಾನತು ಆದೇಶ : ಲೋಕಾಯುಕ್ತ ಪ್ರಕರಣ ಬೆಳಕಿಗೆ ಬಂದ ನಂತರ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಅವರು ಇಲಾಖಾ ವರದಿಯನ್ನು ಪರಿಶೀಲಿಸಿ, ಇಬ್ಬರು ಸಿಬ್ಬಂದಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: 12 ವರ್ಷಗಳ ನಿರಂತರ ನಾಯಕತ್ವ: ಮೋದಿ ಹೆಸರಿಗೆ ಐತಿಹಾಸಿಕ ಸಾಧನೆ
ಅಮಾನತು ಆದೇಶದಲ್ಲಿ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯ, ಬೇಜವಾಬ್ದಾರಿತನ ಹಾಗೂ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯ ವರ್ತನೆ ನಡೆಸಿರುವುದಾಗಿ ಉಲ್ಲೇಖಿಸಲಾಗಿದೆ. ಇದರಿಂದ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.
ಅಮಾನತು ಅವಧಿಯ ಷರತ್ತುಗಳು : ಅಮಾನತು ಅವಧಿಯಲ್ಲಿ ಎಎಸ್‌ಐ ಶಿವಶರಣಪ್ಪ ಮತ್ತು ಮಹಿಳಾ ಮುಖ್ಯ ಪೇದೆ ಜ್ಯೋತಿ ಅವರು ನಿಯಮಾನುಸಾರ ಮೂಲ ವೇತನದ ಶೇ.50ರಷ್ಟು ಜೀವನಾಧಾರ ಭತ್ಯೆ ಪಡೆಯಲಿದ್ದಾರೆ. ಜೊತೆಗೆ, ಪೊಲೀಸ್ ಆಯುಕ್ತರ ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆಯುವಂತಿಲ್ಲ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳಿಗೆ ಶಾಕ್: ಅಕ್ರಮ ಚಟುವಟಿಕೆಗಳಿಗೆ ಖಡಕ್ ಎಚ್ಚರಿಕೆ
ಅಷ್ಟೇ ಅಲ್ಲದೆ, ಅಮಾನತು ಅವಧಿಯಲ್ಲಿ ಯಾವುದೇ ಖಾಸಗಿ ಉದ್ಯೋಗ, ವ್ಯಾಪಾರ ಅಥವಾ ಇತರೆ ಆದಾಯ ಮೂಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿದ್ದು, ಮುಂದಿನ ಕ್ರಮ ತನಿಖೆಯ ವರದಿಯನ್ನು ಆಧರಿಸಿರಲಿದೆ.
ಈ ಘಟನೆ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವ ಸೂಕ್ಷ್ಮ ಪ್ರಕರಣಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಅಧಿಕಾರ ದುರುಪಯೋಗಕ್ಕೆ ಅವಕಾಶ ಇರಬಾರದು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.






















