ವಿಜಯಪುರ: ಎಲ್ಲ ಇಲಾಖೆಗಳನ್ನು ಕೈಯಲ್ಲಿ ಇಟ್ಟುಕೊಳ್ಳುವ ಏಕೈಕ ದೃಷ್ಟಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಂಟು ನೆಪ ಮುಂದಿರಿಸಿ ಸಚಿವ ಸಂಪುಟ ವಿಸ್ತರಣೆ ಮುಂದೂಡುತ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕ ಸಂಪನ್ಮೂಲ ಸಂಗ್ರಹವಾಗುತ್ತದೆ ಎಂಬ ಕಾರಣಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಬ್ಯುಸಿಯಾಗಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಅನೇಕ ಇಲಾಖೆಗಳ ಫೈಲ್‌ಗಳು ವಿಲೇವಾರಿ ಆಗುತ್ತಿಲ್ಲ, ಹಲವಾರು ಇಲಾಖೆಗಳ ಸಚಿವರು ಇಲ್ಲದ ಕಾರಣ ಕೆಲಸಗಳು ಆಗುತ್ತಿಲ್ಲ. ಇದರಿಂದ ಜನತೆ ಹೈರಾಣಾಗುವಂತಾಗಿದೆ ಎಂದು ಟೀಕಿಸಿದರು.
ಯಾವುದೇ ಸರ್ಕಾರ ಬರಲಿ ಮುಖ್ಯಮಂತ್ರಿ ಜೊತೆಗೆ ಪೂರ್ಣ ಪ್ರಮಾಣದ ಸಚಿವರನ್ನ ನೇಮಕ ಮಾಡಬೇಕು, ಇಲ್ಲವಾದರೆ ನಿತ್ಯ ಓಡಾಟ ಲಾಬಿ ನಡೆಸೋದು, ಬೇಡಿಕೆ ಪೂರೈಸೋದು ಇದೇ ಆಗುತ್ತಿದೆ, ಜನರ ಕಷ್ಟಗಳಿಗೆ ಸ್ಪಂದಿಸುವುದೇ ಸಾಧ್ಯವಾಗುವುದಿಲ್ಲ ಎಂದರು.
ರಾಜ್ಯದಲ್ಲಿ ಬರವಿದೆ ಕೃಷಿ ಸಚಿವರು ಇಲ್ಲದಾಗಿದೆ, ಸಿಎಂ ಹೋಗಿ ಒಂದು ಜಮೀನಿನಲ್ಲಿ ಫೋಟೋ ತೆಗೆದುಕೊಂಡು ಬಂದರೆ ಸಾಕೇ ಎಂದು ಯತ್ನಾಳ ಪ್ರಶ್ನಿಸಿದರು. ಕೇಂದ್ರದ ತಂಡ ಬರಬೇಕು ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಬರ ಅಧ್ಯಯನ ಮಾಡಬೇಕು. ಆದರೆ ಇದು ಯಾವುದೂ ರಾಜ್ಯದಲ್ಲಿ ನಡೆಯುತ್ತಿಲ್ಲ, ಆಡಳಿತ ಒಂದೇ ಕಡೆ ಕೇಂದ್ರೀಕೃತವಾಗಿದೆ. ಆಡಳಿತ ಎಂದರೆ ಡಿ.ಕೆ. ಶಿವಕುಮಾರ್ ಎಂಬಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.






















