ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿ.ಎ.) ಎಂದು ರಿಕ್ರಿಯೇಷನ್ ಕ್ಲಬ್ ಲೈಸನ್ಸ್ ಕೊಡಿಸುವುದಾಗಿ ನಂಬಿಸಿ 15 ಲಕ್ಷ ವಂಚನೆ ಎಸಗಿದ ಆರೋಪದಡಿ ದಾಖಲಾದ ಪ್ರಕರಣದಲ್ಲಿ ತುಂಗಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆಹೆಚ್‌ಬಿ ಕಾಲೋನಿಯ ನಿವಾಸಿ ಮಂಜುನಾಥ ಹಂಜಿ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹೇಮಂತ್‌ಕುಮಾರ್ ಅಲಿಯಾಸ್ ಗಣೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ದೂರುದಾರರಿಂದ ವಿವಿಧ ಹಂತಗಳಲ್ಲಿ ಒಟ್ಟು 15 ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ನಗರದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಹಾಗೂ ವಡ್ಡಿನಕೊಪ್ಪದಲ್ಲಿಯೂ ನಗದು ರೂಪದಲ್ಲಿ ಹಣ ಸ್ವೀಕರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನಂತರ ಲೈಸೆನ್ಸ್ ಕೊಡಿಸದೇ ತಲೆಮರೆಸಿಕೊಂಡಿದ್ದನು. ಇತರರಿಗೂ ಇದೇ ರೀತಿ ವಂಚನೆ ಮಾಡಿದ್ದಾನಾ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






















