SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಲಾರಿ–ಟ್ಯಾಂಕರ್ ಡಿಕ್ಕಿಗೆ ಹೊತ್ತಿ ಉರಿದ ವಾಹನಗಳು, ಚಾಲಕ ಸಾವು

ಲಾರಿ–ಟ್ಯಾಂಕರ್ ಡಿಕ್ಕಿಗೆ ಹೊತ್ತಿ ಉರಿದ ವಾಹನಗಳು, ಚಾಲಕ ಸಾವು

0
172

ರಾಷ್ಟ್ರೀಯ ಹೆದ್ದಾರಿ 150ಎಯಲ್ಲಿ ಭೀಕರ ರಸ್ತೆ ಅಪಘಾತ; ಲಾರಿ ಚಾಲಕ ದೀಕ್ಷಿತ್ ಮೃತ್ಯು

ಬಳ್ಳಾರಿ: ಜಿಲ್ಲೆಯ ಗಡಿಭಾಗದಲ್ಲಿರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಡಿ. ಹಿರೇಹಾಳ್ ಮಂಡಲ ವ್ಯಾಪ್ತಿಯ ಜಾಜರಕಲ್ ಟೋಲ್ ಪ್ಲಾಜಾ ಸಮೀಪ ಇಂದು (ಬುಧವಾರ) ನಸುಕಿನಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಬಳ್ಳಾರಿ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 150ಎಯಲ್ಲಿ ಈ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಸಿಮೆಂಟ್ ಟ್ಯಾಂಕರ್‌ಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ತೀವ್ರತೆಯಿಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿ ವಾಹನಗಳು ಹೊತ್ತಿ ಉರಿದಿದ್ದು, ಸ್ಥಳದಲ್ಲಿದ್ದ ಜನರು ಆತಂಕಕ್ಕೀಡಾದರು.

ಇದನ್ನೂ ಓದಿ: IIIT ಧಾರವಾಡ ಸಾಧನೆ: ಸಿಲಿಕಾನ್ ಚಿಪ್‌ಗೆ ಸಿದ್ಧಾರೂಢರ ಹೆಸರು

ಮಾಹಿತಿಯ ಪ್ರಕಾರ, ಟೋಲ್ ಪ್ಲಾಜಾ ದಾಟಿದ ಬಳಿಕ ಸಿಮೆಂಟ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಪಂಕ್ಚರ್ ಆಗಿತ್ತು. ಇದರಿಂದ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ. ಇದೇ ವೇಳೆ ರಾಂಪುರಂ ಕಡೆಯಿಂದ ವೇಗವಾಗಿ ಬಂದ ಮತ್ತೊಂದು ಲಾರಿ ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕೂಡಲೇ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವಾಹನದ ಕ್ಯಾಬಿನ್ ಸೇರಿದಂತೆ ಸಂಪೂರ್ಣ ಭಾಗಕ್ಕೆ ವ್ಯಾಪಿಸಿತು. ಈ ವೇಳೆ ಲಾರಿಯ ಚಾಲಕ ದೀಕ್ಷಿತ್ ಕ್ಯಾಬಿನ್‌ನೊಳಗೆ ಸಿಲುಕಿಕೊಂಡಿದ್ದು, ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಯಿತು. ಆದರೆ ಅಷ್ಟರಲ್ಲಾಗಲೇ ಎರಡೂ ವಾಹನಗಳು ಬಹುತೇಕ ಸುಟ್ಟು ಕರಕಲಾಗಿದ್ದವು.

ಇದನ್ನೂ ಓದಿ: ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜಾ ನಿಧನ

ಘಟನಾ ಸ್ಥಳಕ್ಕೆ ರಾಯದುರ್ಗ ಗ್ರಾಮೀಣ ವೃತ್ತ ನಿರೀಕ್ಷಕ ವೆಂಕಟರಮಣ, ಡಿ. ಹಿರೇಹಾಳ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಗುರು ಪ್ರಸಾದ್ ರೆಡ್ಡಿ ಹಾಗೂ ಬೊಮ್ಮನಹಳ್ಳಿ ಠಾಣೆಯ ಉಪನಿರೀಕ್ಷಕ ನಬಿ ರಸೂಲ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 150ಎಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳ ಸಾಲು ನಿರ್ಮಾಣವಾಗಿದ್ದು, ಪೊಲೀಸರು ಹಾಗೂ ಹೆದ್ದಾರಿ ಸಿಬ್ಬಂದಿ ಸಂಚಾರವನ್ನು ಸುಗಮಗೊಳಿಸಲು ಕ್ರಮ ಕೈಗೊಂಡರು.

ಇದನ್ನೂ ಓದಿ: 12 ವರ್ಷಗಳ ನಿರಂತರ ನಾಯಕತ್ವ: ಮೋದಿ ಹೆಸರಿಗೆ ಐತಿಹಾಸಿಕ ಸಾಧನೆ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ, ಲಾರಿಯ ವೇಗ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಮೃತ ಚಾಲಕ ದೀಕ್ಷಿತ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆಯು ಪ್ರದೇಶದಲ್ಲಿ ವಿಷಾದದ ವಾತಾವರಣ ಸೃಷ್ಟಿಸಿದೆ.