SK Home Ad
Home ಸಿನಿ ಮಿಲ್ಸ್ ‘ಆ ದಿನಗಳು’ ಬಳಿಕ ಮತ್ತೊಂದು ಭೂಗತ ಲೋಕದ ಕಥೆ: ಕೆ.ಎಂ. ಚೈತನ್ಯ ನಿರ್ದೇಶನದ ‘ಬಲರಾಮನ ದಿನಗಳು’...

‘ಆ ದಿನಗಳು’ ಬಳಿಕ ಮತ್ತೊಂದು ಭೂಗತ ಲೋಕದ ಕಥೆ: ಕೆ.ಎಂ. ಚೈತನ್ಯ ನಿರ್ದೇಶನದ ‘ಬಲರಾಮನ ದಿನಗಳು’ ಧೂಳೆಬ್ಬಿಸಲು ಸಜ್ಜು!

0
133

ಸ್ಯಾಂಡಲ್‌ವುಡ್‌ನಲ್ಲಿ ಅಂಡರ್‌ವರ್ಲ್ಡ್ ಕಥೆಗಳಿಗೆ ಯಾವತ್ತೂ ಒಂದು ಅದ್ಭುತ ಕ್ರೇಜ್ ಇದ್ದೇ ಇರುತ್ತೆ. ಅದರಲ್ಲೂ ಸೂಪರ್ ಹಿಟ್ ‘ಆ ದಿನಗಳು’ ಚಿತ್ರದ ಮೂಲಕ ಕರಾವಳಿ ಮತ್ತು ಗಾಂಧಿನಗರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದ ಚತುರ ನಿರ್ದೇಶಕ ಕೆ.ಎಂ. ಚೈತನ್ಯ, ಈಗ ಬರೋಬ್ಬರಿ 19 ವರ್ಷಗಳ ನಂತರ ಮತ್ತೊಂದು ಭೂಗತ ಲೋಕದ ರೋಚಕ ಕಥೆಯೊಂದಿಗೆ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅದೇ “ಬಲರಾಮನ ದಿನಗಳು”. ಸದ್ಯ ಈ ಚಿತ್ರದ ರೇಟ್ರೋ ಶೈಲಿಯ ಪೆಪ್ಪಿ ಸಾಂಗ್ “ಕ್ವಾಟರ್ರು” ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಇಡೀ ಚಿತ್ರರಂಗದ ಗಮನ ಸೆಳೆದಿದೆ. ಹಿರಿಯ ನಟಿ ತಾರಾ ಅನುರಾಧಾ ಅವರು ಈ ವಿಶೇಷ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಮನಸಾರೆ ಹಾರೈಸಿದ್ದಾರೆ.

ಸೌತ್ ಇಂಡಸ್ಟ್ರಿಯ ದುಬಾರಿ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಅವರ ಮ್ಯೂಸಿಕ್ ಜಾದೂ ಈ ಹಾಡಿನಲ್ಲಿದ್ದು, ನಟಿ ವಂದಿತಾಗೌಡ ಈ ಸಾಂಗ್‌ಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಹಾಡನ್ನು ಲಾಂಚ್ ಮಾಡಿ ಮಾತನಾಡಿದ ನಟಿ ತಾರಾ ಅನುರಾಧಾ, ಈ ಪೆಪ್ಪಿ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಚಿತ್ರದ ನಿರ್ಮಾಪಕರಾದ ಶ್ರೇಯಸ್ ಹಾಗೂ ಪದ್ಮಾವತಿ ಜಯರಾಮ್ ಅವರ ಸಿನಿಮಾ ಪ್ಯಾಷನ್ ಅನ್ನು ಕೊಂಡಾಡಿದ ಅವರು, ಇಡೀ ತಂಡಕ್ಕೆ ಪದ್ಮಮ್ಮ ತಾಯಿಯಂತಿದ್ದಾರೆ ಎಂದರು. ವೇಣು ಅವರ ಕ್ಲಾಸಿಕ್ ಕ್ಯಾಮೆರಾ ವರ್ಕ್ ಹಾಗೂ ಸಂತೋಷ್ ನಾರಾಯಣನ್ ಅವರ ಅದ್ಭುತ ಮ್ಯೂಸಿಕ್ ಜೊತೆಗೆ, ಪ್ರತಿಷ್ಠಿತ ಟಿ-ಸೀರೀಸ್ ಸಂಸ್ಥೆ ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿರುವುದನ್ನು ನೋಡಿದರೆ, ‘ಬಲರಾಮನ ದಿನಗಳು’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ಚರಿತ್ರೆ ಸೃಷ್ಟಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾರಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಇದು ಮೂರನೇ ಹಾಡಾಗಿದೆ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ತಿಳಿಸಿದ್ದಾರೆ. ‘ಆ ದಿನಗಳು’ ಸಿನಿಮಾ ಬಂದು ಇಷ್ಟು ವರ್ಷಗಳಾದ ನಂತರ, ರೌಡಿಸಂ ಮತ್ತು ಅಂಡರ್‌ವರ್ಲ್ಡ್ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿ, ಆ ಜಗತ್ತನ್ನು ಹತ್ತಿರದಿಂದ ತಿಳಿದುಕೊಂಡು ಈ ಹೊಸ ವರ್ಷನ್ ಕಥೆಯನ್ನು ಸಿದ್ಧಪಡಿಸಿರುವುದಾಗಿ ಅವರು ಹೇಳಿದ್ದಾರೆ. ಚಿತ್ರಮಂದಿರದಲ್ಲೇ ಈ ಸಿನಿಮಾವನ್ನು ನೋಡಿದಾಗ ಸಿಗುವ ಫೀಲ್ ಮತ್ತು ಮಜಾವೇ ಬೇರೆ ಎನ್ನುವುದು ನಿರ್ದೇಶಕರ ಮಾತು. ಇತ್ತ ನಿರ್ಮಾಪಕ ಶ್ರೇಯಸ್ ಸದ್ಯದಲ್ಲೇ ಮತ್ತೊಂದು ಸಾಂಗ್ ಹಾಗೂ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್‌ನಲ್ಲಿದ್ದರೆ, ಸಹ-ನಿರ್ಮಾಪಕಿ ಪದ್ಮಾವತಿ ಜಯರಾಮ್ ಅವರು ನಿರ್ದೇಶಕರ ಮೇಲಿರುವ ಸಂಪೂರ್ಣ ಭರವಸೆಯಿಂದ ತಮಗೆ ಚಿತ್ರದ ಯಶಸ್ಸಿನ ಬಗ್ಗೆ ಯಾವುದೇ ಭಯವಿಲ್ಲ ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾರೆ.

ಕೊನೆಯದಾಗಿ ಚಿತ್ರದ ನಾಯಕ, ಟೈಗರ್ ವಿನೋದ್ ಪ್ರಭಾಕರ್ ಮಾತನಾಡಿ, ‘ಮಾದೇವ’ ಚಿತ್ರದ ನಂತರ ತಾವು ಒಪ್ಪಿಕೊಂಡ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ತಮ್ಮ ಸಿನಿ ಕೆರಿಯರ್‌ನಲ್ಲೇ ಇದು ಅತ್ಯಂತ ಬಿಗ್ಗೆಸ್ಟ್ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೊಂದು ಸಂಪೂರ್ಣ ಕಾಲ್ಪನಿಕ ಕಥೆಯಾಗಿದ್ದು, ಬಯೋಪಿಕ್ ಮಾಡುವಾಗ ಇರುವ ಭಯ ಇಲ್ಲಿಲ್ಲ ಮತ್ತು ಒಬ್ಬ ನಟನಾಗಿ ಯಾವುದೇ ಸವಾಲಿನ ಪಾತ್ರ ಮಾಡಲು ತಾವು ಸದಾ ಸಿದ್ಧ ಎಂದಿದ್ದಾರೆ. ಅದರಲ್ಲೂ ಸ್ಯಾಂಡಲ್‌ವುಡ್‌ನ ದೈತ್ಯ ವಿತರಕ ಸಂಸ್ಥೆಯಾದ ಕೆವಿಎನ್ (KVN) ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾ ಥಿಯೇಟರ್‌ಗೆ ಬರುತ್ತಿರುವುದು ಇಡೀ ಚಿತ್ರತಂಡಕ್ಕೆ ಆನೆಬಲ ತಂದಂತಾಗಿದೆ. ಒಟ್ಟಿನಲ್ಲಿ ವಿನೋದ್ ಪ್ರಭಾಕರ್ ಹಾಗೂ ಪ್ರಿಯಾ ಆನಂದ್ ಕಾಂಬಿನೇಷನ್‌ನ ‘ಬಲರಾಮನ ದಿನಗಳು’ ಗಾಂಧಿನಗರದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ಮುನ್ಸೂಚನೆ ನೀಡಿದೆ.