SK Home Ad
Home ಅಂಕಣ ಅಂಕಣ ಬರಹ |`ಜಿರಳೆ’ಗಳಿಂದ ಬಸವಳಿದು ಬೆತ್ತಲೆಯಾದವರು

ಅಂಕಣ ಬರಹ |`ಜಿರಳೆ’ಗಳಿಂದ ಬಸವಳಿದು ಬೆತ್ತಲೆಯಾದವರು

0
3

ದೆಹಲಿಯ ಐತಿಹಾಸಿಕ ಪ್ರಸಿದ್ಧ ಜಂತರ್ ಮಂತರ್ ಈಗ ಪ್ರಶಾಂತವಾಗಿದೆ. ಮೂವತ್ತೇಳು ದಿನಗಳ ಕಾಲ ಜಂತರ್ ಮಂತರ್‌ನಲ್ಲಿ ಎದ್ದಿದ್ದ ಪ್ರಶ್ನೆಗಳು, ಆಕ್ರೋಶಗಳು, ಸಂಘರ್ಷಗಳು ಮತ್ತು ತಂತ್ರ-ರಣತಂತ್ರಗಳು ಈಗ ಸಂಸತ್ತಿನಲ್ಲಿ ಪ್ರತಿಧ್ವನಿಸುತ್ತಿವೆ.

ನೀಟ್ ವಿದ್ಯಾರ್ಥಿಗಳ ಪರ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಂದೋಲನಕ್ಕೆ ಇಳಿಯುವಾಗ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ನಮ್ಮ ಆಡಳಿತ ವ್ಯವಸ್ಥೆ. ಯಾವ ಮಂತ್ರಿಯ ರಾಜೀನಾಮೆಯನ್ನು ಪಡೆಯೋಲ್ಲ… ಮತ್ತು ಇದು ಯುಪಿಎ ಸರ್ಕಾರವಲ್ಲ ಎಂದು ಯಾವ ಸರ್ಕಾರ ಹೇಳಿತ್ತೋ ಅದೇ ಸರ್ಕಾರ ಈಗ ಜೆನ್-ಜಿಗೆ ಬಾಗಿ ಕೇಂದ್ರ ಶಿಕ್ಷಣ ಸಚಿವರ ತಲೆದಂಡವನ್ನು ಮಾಡಿದೆ.

ಹಾಗೇ ಮಧ್ಯರಾತ್ರಿಯಲ್ಲೂ ಕೂಡ ಪ್ರಧಾನಿ ಸೆಲ್ಫಿ ಇನ್ಸ್ಟಾ ಮಾಡುವ, ಗಾರ್ಡನ್‌ನಲ್ಲಿ ಯೂ ಟ್ಯೂಬ್ ಮುಂದೆ ರೀಲ್ಸ್ ಮಾಡಬೇಕಾದ ಅನಿವಾರ್ಯತೆಯನ್ನು ಈ ಜೆನ್ ಜಿ ಆಂದೋಲನ ಸೃಷ್ಟಿಸುವಂತಾಯಿತು!

ಇದು ಕೇವಲ ಆರಂಭವಷ್ಟೇ. ಇನ್ನೂ ಹಲವು ಸಂಗತಿಗಳಿವೆ. ನಾವು ವಿಶ್ರಮಿಸೋಲ್ಲ ಎಂದು ಸಿಜೆಪಿಯ ಸಂಸ್ಥಾಪಕ ಮತ್ತು ಮಿದುಳು ಅಭಿಜಿತ್ ದೀಪ್ಕೆ ಹಾಗೂ ತಂಡ ಎಚ್ಚರಿಕೆಯನ್ನು ನೀಡಿದೆ. ಇದು ಯುವಕರ ಸಂಘಟಿಸುವ ಮತ್ತು ಅವರ ಧ್ವನಿಯನ್ನು ಎತ್ತಿ ಹಿಡಿದು ಅವರ ಪರವಾಗಿ ನಿಲ್ಲುವ ವಿಶ್ವಾಸ-ಶಕ್ತಿಯನ್ನು ಸ್ಪಷ್ಟಪಡಿಸಿದಂತಾಗಿದೆ. ಜಂತರ್ ಮಂತರ್ ಚಳವಳಿ ಮತ್ತು ಸಿಜೆಪಿ ಜೆನ್-ಜಿ ಹೋರಾಟ ಹಲವು ಪಾಠಗಳನ್ನು ಕಲಿಸಿದೆ. ಹಲವರನ್ನು ಬೆತ್ತಲೆಗೊಳಿಸಿದೆ. ಹಲವರಿಗೆ ಸವಾಲೊಡ್ಡಿದೆ.‌

ಹೌದು. ಕಾಕ್ರೋಚ್ ಜನತಾ ಪಾರ್ಟಿ ಡಿಜಿಟಲ್‌ನಲ್ಲಿ ಅಸ್ತಿತ್ವಕ್ಕೆ ಬಂದಾಗ ಇದೊಂದು ಆನ್‌ಲೈನ್ ಡಿಜಿಟಲ್‌ ಐಟಿಗಷ್ಟೇ ಸೀಮಿತ ಎಂದು ನಿರ್ಲಕ್ಷಿಸಲಾಯಿತು. ಸಾಂಪ್ರದಾಯಿಕ ಮನಸ್ಥಿತಿಯ ಆಡಳಿತ ತಮಾಷೆ ಮಾಡಿತು. ಜಿರಳೆಗಳಿಗೆ ಹಿಟ್ ಸಾಕು ಹೊಸಕಿ ಹಾಕಲು ಎಂದರು. ಜಿರಳೆಗೆ ಪೊರಕೆಯೇ ಪ್ರೇರಣೆ ಎಂದು ಲಘುವಾಗಿ ಮೀವ್ಸ- ತಮಾಷೆಗಳು ನಡೆದವು!

ನಿರುದ್ಯೋಗಿ ಯುವಕರೆಲ್ಲ ಕಾಕ್ರೋಚ್‌ಗಳಂತೆ ವ್ಯಾಪಿಸುತ್ತಿದ್ದಾರೆ ಎನ್ನುವ ಒಂದೇ ಒಂದು ದೇಶದ ಮುಖ್ಯ ನ್ಯಾಯಮೂರ್ತಿಗಳ ಮಾತು ಸಿಜೆಪಿ ಉದಯಕ್ಕೆ ಕಾರಣವಾಗಿ, ಎರಡೇ ತಿಂಗಳಿನಲ್ಲಿ ಸರ್ಕಾರವನ್ನೇ ಬಾಗಿಸಿದೆ. ಓರ್ವ ಪ್ರಧಾನ ಮಂತ್ರಿಯನ್ನೇ ಕಕ್ಕಾಬಿಕ್ಕಿಯಾಗಿಸಿ, ತಲೆದಂಡ ಪಡೆದಿದೆ.

ಏನೆಲ್ಲ, ಯಾರಿಗೆಲ್ಲ ಪಾಠ ಕಲಿಸಿದೆ ಅಥವಾ ಇಷ್ಯೂ (ಮುದ್ದೆ) ಎತ್ತಿದೆ ಈ ಹೋರಾಟ? ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ಚಾರಿತ್ರ್ಯ ಹನನ ಮಾಡಿ ವೈಯಕ್ತಿಕ ತೇಜೋವಧೆಗೆ ಇಳಿಯುವವರಿಗೆ ಈ ಸಿಜೆಪಿ ಚಳವಳಿ ಸ್ಪಷ್ಟ ಎಚ್ಚರಿಕೆಯನ್ನಂತೂ ನಿಶ್ಚಿತವಾಗಿ ನೀಡಿದೆ.

ಕಳೆದ ಹನ್ನೆರಡು ವರ್ಷಗಳಲ್ಲಿ ಯಾರು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಅಥವಾ ಬಿಜೆಪಿಯನ್ನು ವಿರೋಧಿಸುತ್ತಾರೋ ಅವರೆಲ್ಲರಿಗೆ ದೇಶದ್ರೋಹಿ, ಪಾಕ್ ಏಜೆಂಟ್, ಚೀನಾ ಏಜೆಂಟ್, ಭಯೋತ್ಪಾದಕ, ಧರ್ಮ ವಿರೋಧಿ, ಎಡಚರ ಇತ್ಯಾದಿಗಳೆಲ್ಲವುಗಳ ಪಟ್ಟವನ್ನು ಕಟ್ಟಿ ವೈಯಕ್ತಿಕ ಬದುಕು ಬವಣೆಗಳನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಳ್ಳಲಾಗಿತ್ತು. ಈ ಸಾರೆಯೂ ಕೂಡ ದೇಶದ ಖ್ಯಾತ ಪರಿಸರವಾದಿ, ತಜ್ಞ, ಪದ್ಮಶ್ರೀ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಈ ಮಂದಿಯೇನೂ ಸುಮ್ಮನೇ ಕೂರಲಿಲ್ಲ!

ರಾಷ್ಟ್ರದ ಅಗ್ರಮಾನ್ಯ ಆಂಕರ್‌ಗಳಿಂದ ಹಿಡಿದು ಗ್ರಾಮೀಣ ವಕ್ತಾರರವರೆಗೆ, ಪ್ರಸಿದ್ಧ, ಅಪ್ರಸಿದ್ಧ ಅಂಕಣಕಾರರಿಂದ ಹಿಡಿದು ಸ್ಥಳೀಯ ಪಂಚಾಯಿತಿ ಸದಸ್ಯರವರೆಗೆ ವಾಂಗ್ಚುಕ್ ವಿರುದ್ಧ ಟೀಕೆ ವ್ಯಂಗ್ಯ ಮಾಡಿದವರೇ… ಆದರೆ ಕೊನೆಗೂ ಬಾಗಿದ್ದು ಸರ್ಕಾರ, ತಲೆಕೆಡಿಸಿಕೊಳ್ಳದ ವಾಂಗ್ಚುಕ್ ಮತ್ತು ಅವರ ಬೆಂಬಲಿಗರಿಗೇ! ತಮಾಷೆ ಎಂದರೆ ಇದೇ ವಾಂಗ್ಚುಕ್‌ರನ್ನು ಬೆಳೆಸಿದವರು, ಹೊಗಳಿದವರು ಆಗ ಇದೇ ಮಂದಿ. ಈಗ ವಾಂಗ್ಚುಕ್ ಇವರುಗಳಿಗೆ ಷಡ್‌ವೈರಿ!!

ಯಾರ್ಯಾರು ಈ ದೇಶದಲ್ಲಿ ಕೇಂದ್ರ ಸರ್ಕಾರದ ನೀತಿ ಧೋರಣೆಗಳನ್ನು ಟೀಕಿಸುತ್ತಾರೋ ಅವರಿಗೆಲ್ಲ ಒಂದಿಲ್ಲೊಂದು ಪಟ್ಟ ಗ್ಯಾರಂಟಿ. ಹೋರಾಟಕ್ಕೆ ಇಳಿದವರ ಮೇಲೆ ಸುಳ್ಳಪಿಂಗ್ಲಿ ಟೀಕಾಸ್ತ್ರಗಳು, ಬಲವಂತದ ಕ್ರಮಗಳು, ಎನ್ಐಎ ದಾಳಿಗಳು. ಅವರಷ್ಟೇ ಅಲ್ಲ. ಅವರ ಸಂಬಂಧಿಕರು, ಸ್ನೇಹಿತರುಗಳ ಮೇಲೂ ಇದೇ ಹಗೆ ಕ್ರಮ… ಎಲ್ಲರೂ ನೊಂದು ಬಸವಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪತ್ರಕರ್ತರು, ಸ್ವತಂತ್ರ ವಿಚಾರಧಾರೆ ಬಿತ್ತುವವರು, ವೈಚಾರಿಕ ಕ್ರಾಂತಿ ಎಬ್ಬಿಸಿದವರು, ಧರ್ಮ, ಕೋಮು ಸಂಘರ್ಷ ತಪ್ಪಿಸುವ ವಿಚಾರವಂತರೆಲ್ಲರೂ ನಲುಗಿ ಹೋಗುತ್ತಿರುವ ಈ ಸಂದರ್ಭದಲ್ಲಿ, `ನಿಮ್ಮ ವೈಯಕ್ತಿಕ ತೇಜೋವಧೆ, ಅನೈತಿಕ ತಂತ್ರ, ಕುಚೇಷ್ಟೆಗಳ ಅಟ್ಟಹಾಸ, ಸುಳ್ಳು, ಅಪಪ್ರಚಾರ ಇವ್ಯಾವವೂ ನಡೆಯಲ್ಲ. ಪುನರ್‌ವಿಮರ್ಶೆ ಮಾಡಿಕೊಳ್ಳಿ’ ಎನ್ನುವ ಸ್ಪಷ್ಟ ಸಂದೇಶವನ್ನು ಜಂತರ್ ಮಂತರ್ ಹೋರಾಟದಲ್ಲಿ ಜೆನ್‌ಜಿಗಳು ಸಾರಿದ್ದಾರೆ.

ಹಾಗೇ ದೇಶದ ಆಡಳಿತ ನಡೆಸುವವರಿಗೆ ಮತ್ತು ವಿಪಕ್ಷಗಳಿಗೆ ಕೂಡ ಇಷ್ಟೇ ಸ್ಪಷ್ಟ ಎಚ್ಚರಿಕೆಯನ್ನು ಈ ಹೋರಾಟ ನೀಡಿದೆ. ಸಿಜೆಪಿ ಕಾರ್ಯಕರ್ತರನ್ನು, ಯುವಕರನ್ನು ದಮನಕಾರಿಯಾಗಿ ಓಡಿಸಬಹುದೆಂದು ತಿಳಿದಿದ್ದವರಿಗೆ ತಕ್ಕ ಪಾಠವಾಗಿದೆ. ಜೆನ್‌ಜಿಗಳು ಇದರ ವಿರುದ್ಧ ಸೆಟೆದು ನಿಂತಾಗ, ಹತ್ತಿಕ್ಕಲು ಕರೆಂಟ್ ಲಾಠಿ, ಲಾಠಿ ಚಾರ್ಜ್, ವಾಟರ್ ಜೆಟ್, ಪೆಲೆಟ್ ಗನ್ ಎಲ್ಲವುಗಳ ಬಳಕೆಯಾಯಿತು. ಆದರೆ ಯುವಕರು ಮತ್ತು ಜನರ ಆಕ್ರೋಶದ ಮುಂದೆ ವಿಫಲವೂ ಆಯ್ತು.

ಯುವಕರ ಧರಣಿಗೆ ಮೌನ ತಾಳಿ ವಿದೇಶಗಳಲ್ಲಿ ಸಂಚಾರ ನಡೆಸುತ್ತಿದ್ದ ಪ್ರಧಾನಿ ನಂತರ ಮೌನ ಮುರಿಯಲೇಬೇಕಾಯ್ತು. `ನಿಮ್ಮ ಪರೀಕ್ಷಾ ಪೇ ಚರ್ಚಾ, ಮನ್ ಕಿ ಬಾತ್, ಯುವ ವಿದ್ಯಾರ್ಥಿಗಳೊಂದಿಗೆ ಸಂವಾದ ಇವೆಲ್ಲ ಬೇಕಾಗಿಲ್ಲ. ಮೊದಲು ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಿ, ನಿರುದ್ಯೋಗಿಗಳ ಕೈಗೆ ಉದ್ಯೋಗ ಕೊಡಿ. ರಾಜಕಾರಣ ನಮಗೆ ಬೇಕಿಲ್ಲ. ಮಾತು ಸಾಕು, ಕಾರ್ಯವಾಗಲಿ’ ಎಂದು.

ಹೋರಾಟಗಾರರಿಗೆ ತುಕ್ಡೆ ಗ್ಯಾಂಗಿನ ಧರಣಿ, ಚೀನಾ ಏಜೆಂಟ್, ಪಾಕ್ ಏಜೆಂಟ್, ಅಮೇರಿಕದ ಹಣ, ಹೊರ ದೇಶಗಳಿಂದ ಆಹಾರ ಪೂರೈಕೆ, ಕೆಲ ಕಂಪನಿಗಳು ಕೋಟ್ಯಂತರ ರೂಪಾಯಿ ಅಕ್ರಮವಾಗಿ ಸಹಾಯ ಮಾಡಿ ದೇಶದ್ರೋಹ ಮಾಡುತ್ತಿವೆ, ಪಾಕ್ ಐಎಸ್ಐ ಏಜೆಂಟರು ನುಸುಳುವಂತಾಗಿದೆ ಎಂಬೆಲ್ಲ ಆರೋಪಗಳು ಇವರ ಮೇಲೆ ಸುರಿದವು.

ನಿಜ. ಇಂತಹ ಸಂದರ್ಭಗಳನ್ನು ಸಮಾಜ ಘಾತಕ ಶಕ್ತಿಗಳು ಉಪಯೋಗಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇಲ್ಲಿಯೂ ಆಗಿರಬಹುದು. ಆದರೆ ಅವರೆಲ್ಲರನ್ನೂ ನಿಯಂತ್ರಿಸುವಲ್ಲಿ ಜೆನ್‌ಜಿ ಯಶಸ್ವಿಯಾಗಿತ್ತು.

ಈಗ ಎದ್ದಿದೆ. ಯಾರು ಲಾಠಿ ಚಾರ್ಜ್‌ಗೆ ಆದೇಶ ನೀಡಿದವರು? ಯಾರು ಪೆಲೆಟ್ ಗನ್ ಬಳಕೆಗೆ ನಿರ್ದೇಶಿಸಿದರು? ಯಾರು ಈ ಜೆನ್‌ಜಿಗಳ ಬೆಂಬಲಿಗರನ್ನು ಹಿಂಸಿಸಿ ಹತ್ತಿಕ್ಕಿದವರು? ಅವರ ಜೆನ್‌ಜಿ ಸ್ಲೋಗನ್‌ಗಳು ಸಂಸತ್ತಿನಲ್ಲಿ ಪ್ರತಿಧ್ವನಿಸಿದಂತೆ ತಡೆದವರು? ಎಂದು…!

ಜೆನ್‌ಜಿಗಳಿಗೆ ಇನ್ನಷ್ಟು ಆಕ್ರೋಶ ಹುಟ್ಟಿಸಿದ್ದು, ಈ ಪೊಲೀಸ್ ದೌರ್ಜನ್ಯವನ್ನು ವೀಕ್ಷಿಸಲು ನಮಗೆ ಸಮವಿಲ್ಲ; ನ್ಯಾಯಾಲಯದ ಸಮಯವನ್ನು ಹಾಳು ಮಾಡಬೇಡಿ ಎಂದು ದೇಶದ ಮುಖ್ಯನ್ಯಾಯಮೂರ್ತಿಗಳೇ ಹೇಳಿದ್ದು. ಪರಿಣಾಮ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಕಾರ್ಯವೈಖರಿ ಮತ್ತು ಧೋರಣೆ ಕೂಡ ಜಿಜ್ಞಾಸೆಗೊಳಗಾದವು. ಸುಪ್ರೀಂ ನ್ಯಾಯವಾದಿಗಳೇ ಯೂಥ್‌ ಮೂವಮೆಂಟ್ ಬೆಂಬಲಿಸಿ ಬೀದಿಗೆ ಬಂದರು..

ಜನ ಬೆಂಬಲ ಇರುವಲ್ಲಿ ರಾಜಕಾರಣ ನುಸುಳುವುದೇ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಪ್ರಧಾನಿ ಮನೆ ಮುಂದೆ ಹಠಾತ್ ಧರಣಿ ನಡೆಸಿತು. ಪ್ರಧಾನ ಮಂತ್ರಿಗಳೇ ಸಂಸತ್ತಿಗೆ ಬನ್ನಿ ಎಂದು ಆಹ್ವಾನವನ್ನು ನೀಡಿತು. ಯಾವ ಪ್ರತಿಪಕ್ಷವಿದ್ದರೂ ಹೀಗೆ ಮಾಡಬೇಕಾದದ್ದೇ. ಆದರೆ ರಾಹುಲ್‌ ಪಡೆಗೆ ಜೆನ್‌ಜಿ ನೀಡಿದ ಉತ್ತರವೂ ಅಷ್ಟೇ ಸ್ಪಷ್ಟವಾಗಿತ್ತು. ನಿಮ್ಮ ಹೋರಾಟ ನೀವು ಮಾಡಿ. ಕಳೆದ ಮೂವತ್ತು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರೂ ಒಮ್ಮೆಯೂ ಬಂದು ಕೇಳದವರು ಈಗ ಮೈಲೇಜ್ ಪಡೆಯಬೇಡಿ ಎಂದು ಪೆಟ್ಟು ನೀಡಿತು. ಆಗಲೇ ನಡ್ಡಾ ಮತ್ತು ಜಿತೇಂದ್ರ ರಾಥೋಡ್ ವಾಂಗ್ಚುಕ್ ದಾಖಲಾಗಿದ್ದ ಆಸ್ಪತ್ರೆಗೆ ಧಾವಿಸಿ ಧ್ವನಿಯನ್ನು ಆಲಿಸಿದ್ದು. ಇದಾದ ನಂತರವೇ ಅಲ್ಲವೇ ವಾಂಗ್ಚುಕ್ ಪತ್ನಿ ರಾಹುಲ್‌ರನ್ನು ಟೀಕಿಸಿದ್ದು!

ಎಲ್ಲಕ್ಕೂ ಪ್ರಮುಖವಾಗಿ ಬೆತ್ತಲಾದವರು ಕೆಲ ಮಾಧ್ಯಮಗಳ ಮಂದಿ. ಯುವಕರ ಆಕ್ರೋಶ ಎಷ್ಟಿತ್ತೆಂದರೆ ನೀವು ಇಲ್ಲಿಗೆ ಬರುವುದೂ ಬೇಡ; ಪ್ರಸಾರ ಮಾಡುವುದೂ ಬೇಡ. ನಾವದಕ್ಕೆ ನಮ್ಮದೇ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಲ್ಲದೇ ಕೆಲ ಮಾಧ್ಯಮ ಪ್ರತಿನಿಧಿಗಳು ಬಂದಾಗ ಆಕ್ರೋಶ ವ್ಯಕ್ತಪಡಿಸಿ ಹೊರದಬ್ಬಿದರು. `ಗೋದಿ ಮೀಡಿಯಾ’ ಎಂದೇ ಹೀಗಳೆದು, ದುಡ್ಡಿಗಾಗಿ ವೃತ್ತಿ ಮಾಡಿಕೊಂಡಿದ್ದೀರೆಂದು ಹಣ ಕೊಡಲೂ ಹೋದರು.

ಪಾಪ ಸ್ಥಳಕ್ಕೆ ಹೋದ ಆಂಕರ್‌ಗಳಿಗೆ, ಕ್ಯಾಮರಾಮನ್‌ಗಳಿಗೆ ತರಾಟೆ ತೆಗೆದುಕೊಂಡರೇನು? ಪ್ರಧಾನ ಸ್ಥಾನದಲ್ಲಿ ಕುಳಿತವರು ಬುದ್ಧಿ ಕಲಿಯಲಿಲ್ಲ. ಸರ್ಕಾರವನ್ನು ಎಷ್ಟು ಸಮರ್ಥಿಸಬೇಕೋ ಅಷ್ಟು, ಸಮರ್ಥಿಸಿ ಹೋರಾಟಗಾರರನ್ನು ಏನೆಲ್ಲ ರೀತಿ ಹಣಿಯಬೇಕೋ ಹಾಗೆಲ್ಲ ಮಾಡಿದರು. ಅದರ ಕಾವು, ಕಿಚ್ಚು, ಅಸಮಾಧಾನ ಎಷ್ಟಿತ್ತೆಂದರೇ ಇಡೀ ಜಗತ್ತಿನ ಎದಿರು ದೇಶದ ಮಾಧ್ಯಮ, ಸಾರ್ವಭೌಮತ್ವ, ಬದ್ಧತೆ, ಬೆತ್ತಲಾಗಿ ಹೋದವು. ಸ್ಟುಡಿಯೋದಲ್ಲಿ ಪ್ರೈಮ್‌ ಟೈಮ್‌ಗಳು ಕೂಗು ಮಾರಿಗಳಂತೆ ಕಂಡವು. ಕೊನೆಗೂ ಬಾಗಿದ್ದು ಸರ್ಕಾರವೇ, ಅಪಹಾಸ್ಯಕ್ಕೆ ಈಡಾದದ್ದು ಮಾಧ್ಯಮಗಳೇ.

ಮುರುಳಿ ಮನೋಹರ್ ಜೋಶಿ, ಸಂಘ ಪರಿವಾರದ ಕೆಲ ವಕ್ತಾರರು ಮೊದಲು ವಿದ್ಯಾರ್ಥಿಗಳೊಂದಿಗೆ ಮಾತನಾಡಿ; ನೀಟ್ ವ್ಯವಸ್ಥೆ ಸರಿಪಡಿಸಿ, ಅವರನ್ನು ದಮನಿಸುವುದು ಸರಿಯಲ್ಲ ಎಂದು ಧ್ವನಿ ಎತ್ತಿದಾಗಲೇ ಬುಡಕ್ಕೆ ಬೆಂಕಿ ಬಿದ್ದದ್ದು ಅರಿವಾಯಿತು. ಎನ್‌ಡಿಎ ಬೆಂಬಲಿತ ಪಕ್ಷಗಳು ಜೆನ್‌ಜಿ ಹೋರಾಟಕ್ಕೆ ನೀಡಿದ ಸ್ಪಂದನೆಗೆ ಅಸಮಾಧಾನ ವ್ಯಕ್ತಪಡಿಸಿದರೆ, ಆರ್‌ಎಸ್ಎಸ್ ಪ್ರಮುಖ ಮೋಹನ ಭಾಗವತ್, `ಯುವಕರ ಜೊತೆ ಮೃದು ಮಾತುಕತೆಯೇ ಪರಿಹಾರ’ ಎಂದರು. ಆಗ ಲಾಠಿ ಒಳಸೇರಿ, ಧಮೇಂದ್ರ ಪ್ರಧಾನ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು!

ಪ್ರಧಾನಿಯವರಿಗೆ ಜೆನ್‌ಜಿಗಳೆಲ್ಲ ಫ್ರೆಂಡ್ಸಗಳಾಗಿ ಕಂಡರು!
ಹಾಗಂತ, ಜೆನ್‌ಜಿ ಹೋರಾಟ ಎಲ್ಲವೂ ವ್ಯವಸ್ಥಿತವಾಗಿದೆ ಎಂದೇನಲ್ಲ. ಸಮಾಜಘಾತಕ ಶಕ್ತಿಗಳು ಈ ಹೋರಾಟವನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ್ದು ನಿಜ. ರಾಷ್ಟ್ರ ವಿರೋಧಿ ಶಕ್ತಿಗಳು ನುಸುಳಿದ್ದೂ ಖರೆ. ಅಲ್ಲಲ್ಲಿಯ ಫಲಕಗಳು, ಹೋರಾಟಕ್ಕಿರುವ ಹಲವಾರು ಅಡ್ಡಿ ಆತಂಕಗಳನ್ನು ನಿಭಾಯಿಸಲು, ನಿರ್ವಹಿಸಲು ಆಗದಿದ್ದರೂ ಜೆನ್‌ಜಿಗೂ ಇಲ್ಲಿಯ ಹೋರಾಟ ಪಾಠವೇ ಸರಿ.

ಈಗಾಗಲೇ `ಇ-20 ಕಾಕ್ರೋಚ್ ಪಾರ್ಟಿ’ ಡಿಜಿಟಲ್‌ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಪ್ರಧಾನ್ ರಾಜೀನಾಮೆ ಶುರುವಾತು ಮಾತ್ರ. ಇನ್ನೂ ಸರಣಿ ರಾಜೀನಾಮೆಗಳ ಸರಪಳಿ ಸಿದ್ಧವಾಗಿದೆಯಾ?

ಏನೇ ಇರಲಿ. ತಮ್ಮ ವಿರುದ್ಧ ಧ್ವನಿ ಎತ್ತಲೇಬಾರದು ಎಂದು ಠೇಂಕರಿಸುವರಿಗೆ ಮೊದಲ ಪಾಠವಾಗಿದೆ. ತಮ್ಮನ್ನು ಟೀಕಿಸಲೇಬಾರದು ಎನ್ನುವ ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆಗಳಿಗೆ ಈ ಹೋರಾಟ ಸವಾಲೊಡ್ಡಿದೆ. ಹಾಗೇ ಹತ್ತಿಕ್ಕುವ, ಫೂತ್ಕರಿಸುವ ಮತ್ತು ವೈಯಕ್ತಿಕ ಚಾರಿತ್ರ್ಯ ಹನನವೇ ತಂತ್ರ ಎಂದುಕೊಂಡವರೆಲ್ಲ ಈಗ ಬೆತ್ತಲಾಗಿರುವುದನ್ನು ತೋರಿಸಿದ ಹೋರಾಟವಿದು. ಇಂಥವು ಇನ್ನಷ್ಟು ಬೇಕೆನ್ನುವ, ಮತ್ತೊಮ್ಮೆ ಬೆಂಬಲಿಸುವ, ಇನ್ನಷ್ಟು ಧ್ವನಿ ಎತ್ತುವ ಕಾರ್ಯ ಅಗತ್ಯವಿದೆ ಎನಿಸುತ್ತದೆಯೇ?