ಹಾವೇರಿ: ಇಡೀ ನಾಡು ಜಗಜ್ಯೋತಿ ಬಸವೇಶ್ವರರ ಜಯಂತಿಯ ಸಂಭ್ರಮದಲ್ಲಿರುವಾಗಲೇ, ಹಾವೇರಿ ನಗರದಲ್ಲಿ ದುಷ್ಕರ್ಮಿಗಳು ಅಕ್ಷಮ್ಯ ಅಪರಾಧವೆಸಗಿದ್ದಾರೆ. ನಗರದ ಹೃದಯ ಭಾಗವಾದ ಗಾಂಧಿ ಸರ್ಕಲ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.
ಬಸವ ಜಯಂತಿಯ ಪವಿತ್ರ ದಿನದಂದೇ ಈ ಕೃತ್ಯ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ (ಏ.೨೦) ಬೆಳ್ಳಂಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ತಡರಾತ್ರಿ ಯಾರೂ ಇಲ್ಲದ ವೇಳೆ ಸ್ಥಳಕ್ಕೆ ಆಗಮಿಸಿದ ಅಪರಿಚಿತ ದುಷ್ಕರ್ಮಿಗಳು, ಉದ್ದೇಶಪೂರ್ವಕವಾಗಿಯೇ ಪುತ್ಥಳಿಯನ್ನು ನೆಲಕ್ಕುರುಳಿಸಿ ಹಾನಿಗೊಳಿಸಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಹಾವೇರಿ ಶಹರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಮಹತ್ವದ ಸುಳಿವುಗಳನ್ನು ಕಲೆಹಾಕುತ್ತಿರುವ ಪೊಲೀಸರು, ತಪ್ಪಿತಸ್ಥರಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇನ್ನು ಈ ಕುರಿತಂತೆ ಹಾವೇರಿ ನಗರಸಭೆಯ ಪೌರಾಯುಕ್ತ ಕಾಂತರಾಜು ಎಚ್ ಮಾತನಾಡಿ ನಗರದ ಮಹತ್ಮಾ ಗಾಂಧಿ ವೃತ್ತದಲ್ಲಿದ್ದ ಗಾಂಧೀಜಿಯವರ ಪುತ್ಥಳಿಯನ್ನು ಯಾರೋ ಕಿಡಗೇಡಿಗಳು ಧ್ವಂಸ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆ ಮಾಡಿ ಆರೋಪಿಗಳ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.























