ವಿಲಾಸ ಜೋಶಿ
ಬೆಳಗಾವಿ: ಕಬ್ಬಿಗೆ ದರ ನಿಗದಿಯಾಗುವವರೆಗೆ ಕಾರ್ಖಾನೆ ಕಾಯಬಹುದು; ನೀರಿಲ್ಲದೆ ಒಣಗುತ್ತಿರುವ ಕಬ್ಬು ಕಾಯುತ್ತದೆಯೇ?
ನ್ಯಾಯಯುತ ಬೆಲೆಗಾಗಿ ನಡೆಯುತ್ತಿರುವ ಹೋರಾಟದ ನಡುವೆ, ಕಟಾವಿಗೆ ಬಂದ ಬೆಳೆಯನ್ನು ಉಳಿಸಿಕೊಳ್ಳುವ ಪ್ರಶ್ನೆಯೂ ರಾಜ್ಯದ ಕಬ್ಬು ಬೆಳೆಗಾರರನ್ನು ಕಾಡುತ್ತಿದೆ. ಬೆಲೆ ನಿರ್ಧಾರ ವಿಳಂಬವಾದರೆ ಹೊಲದಲ್ಲಾಗುವ ನಷ್ಟವನ್ನು ಯಾರು ಭರಿಸಬೇಕು ಎಂಬುದಕ್ಕೆ ಸ್ಪಷ್ಟ ಉತ್ತರ ಬೇಕಿದೆ.
ಕಟಾವಿಗೆ ಬಂದ ಕಬ್ಬನ್ನು ಇನ್ನೆಷ್ಟು ದಿನ ಕಾಯಿಸಬಹುದು? ಕಾಯುವ ಅವಧಿಯಲ್ಲಿ ತೂಕ ಕಡಿಮೆಯಾದರೆ, ನಂತರ ದೊರೆಯುವ ಹೆಚ್ಚುವರಿ ದರ ಆ ನಷ್ಟವನ್ನು ತುಂಬಿಕೊಡುತ್ತದೆಯೇ? ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸದೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂಬ ರೈತ ನಾಯಕರ ನಿಲುವು ಬೆಳೆಗಾರರ ಆದಾಯ ರಕ್ಷಣೆಯ ಪ್ರಶ್ನೆಯನ್ನು ಮುಂದಿಟ್ಟಿದೆ.
ಅಂಕಿಗಳು ಹೇಳುವುದೇನು?: ರಾಜ್ಯದಲ್ಲಿ 81 ಕಾರ್ಯನಿರತ ಸಕ್ಕರೆ ಕಾರ್ಖಾನೆಗಳಿದ್ದು, ಬೆಳಗಾವಿಯಲ್ಲೇ 29 ಘಟಕಗಳಿವೆ. 2025-26ರ ಹಂಗಾಮಿನಲ್ಲಿ ಫೆಬ್ರುವರಿ 25ರವರೆಗೆ 521 ಲಕ್ಷ ಟನ್ ಕಬ್ಬು ನುರಿಸಲಾಗಿತ್ತು ಪ್ರಸಕ್ತ 2026-27ರ ಹಂಗಾಮಿನಲ್ಲಿ ಕರ್ನಾಟಕದ ಕಬ್ಬಿನ ವಿಸ್ತೀರ್ಣ ಸುಮಾರು 6.31 ಲಕ್ಷ ಹೆಕ್ಟೇರ್ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘದ (ಇಸ್ಮಾ) ಪ್ರಾಥಮಿಕ ಅಂದಾಜನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
ಹಿಂದಿನ ಹಂಗಾಮಿನ 6.80 ಲಕ್ಷ ಹೆಕ್ಟೇರ್ಗೆ ಹೋಲಿಸಿದರೆ ಇದು 49 ಸಾವಿರ ಹೆಕ್ಟೇರ್, ಅಂದರೆ ಸುಮಾರು ಶೇ 7.2ರಷ್ಟು ಕಡಿಮೆ. ರೈತನ ಆದಾಯವನ್ನು ಟನ್ಗೆ ದೊರೆಯುವ ದರವೊಂದೇ ನಿರ್ಧರಿಸುವುದಿಲ್ಲ. ಹೊಲದಿಂದ ಕಾರ್ಖಾನೆಗೆ ತಲುಪುವ ಕಬ್ಬಿನ ತೂಕವೂ ನಿರ್ಧರಿಸುತ್ತದೆ. ನೀರಿನ ಕೊರತೆಯಿಂದ ಬಳಲುತ್ತಿರುವ ಪಕ್ವ ಕಬ್ಬಿನ ಕಟಾವು ಮುಂದೂಡಿದಾಗ ತೂಕ ನಷ್ಟವಾದರೆ, ಬೆಲೆ ಏರಿಕೆಯ ಲಾಭ ಕುಗ್ಗುವ ಸಾಧ್ಯತೆಯಿದೆ.
ನೀರಿನ ಸೌಲಭ್ಯವಿರುವ ರೈತನಿಗೂ, ನೀರಿನ ಕೊರತೆ ಎದುರಿಸುತ್ತಿರುವ ರೈತನಿಗೂ ಕಾಯುವ ಸಾಮರ್ಥ್ಯ ಒಂದೇ ಆಗಿರುವುದಿಲ್ಲ. ಒಂದೇ ಗ್ರಾಮದ ಎರಡು ಹೊಲಗಳಲ್ಲಿಯೂ ನಾಟಿ ಅವಧಿ, ಬೆಳೆಯ ಪಕ್ವತೆ ಮತ್ತು ನೀರಿನ ಲಭ್ಯತೆ ಭಿನ್ನವಾಗಿರಬಹುದು. ಇಸ್ಮಾದ ಪ್ರಾಥಮಿಕ ವಿಶ್ಲೇಷಣೆಯನ್ನು ಉಲ್ಲೇಖಿಸಿದ ವರದಿಯು ವಿಜಯಪುರ, ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಮಳೆಯ ಕೊರತೆ ಹಾಗೂ ಬೆಳಗಾವಿಯಲ್ಲಿ ಮಳೆಯ ಏರುಪೇರನ್ನು ಗುರುತಿಸಿದೆ.
ರಾಜ್ಯದ ಒಟ್ಟು ಮಳೆ ಪ್ರಮಾಣಕ್ಕಿಂತ, ಬೆಳೆಗೆ ಅಗತ್ಯವಿದ್ದ ಸಮಯದಲ್ಲಿ ಮಳೆ ಬಂದಿದೆಯೇ ಎಂಬುದೂ ಮುಖ್ಯವಾಗುತ್ತದೆ. ಹೀಗಾಗಿ ಎಲ್ಲ ಪ್ರದೇಶಗಳ ಕಬ್ಬಿಗೂ ಒಂದೇ ರೀತಿಯ ಕಟಾವು ನಿರ್ಧಾರ ಅನ್ವಯಿಸುವುದು ಸೂಕ್ತವಾಗದು ಎನ್ನುವ ಮಾತುಗಳಿವೆ. ಅದೇ ವೇಳೆ ಇನ್ನೂ ಪಕ್ವವಾಗದ ಕಬ್ಬನ್ನು ಆತುರದಲ್ಲಿ ಕಟಾವು ಮಾಡಿಸುವುದನ್ನೂ ತಪ್ಪಿಸಬೇಕು. ಬೆಳಗಾವಿ ಗಡಿಭಾಗದಲ್ಲಿ ಹಂಗಾಮಿನ ಆರಂಭದಲ್ಲೇ ಅಪಕ್ವ ಕಬ್ಬು ನುರಿಸುವಿಕೆಗೆ ಬರುವ ಸಾಧ್ಯತೆಯನ್ನು ವರದಿಗಳು ಎತ್ತಿಹಿಡಿದಿವೆ.
ಕಾರ್ಖಾನೆ ತೆರೆದರೆ ಮಾತ್ರ ಸಮಸ್ಯೆ ಮುಗಿಯುವುದಿಲ್ಲ: ಕಾರ್ಖಾನೆ ಆರಂಭವಾದರೂ ಎಲ್ಲ ರೈತರ ಕಬ್ಬು ಒಂದೇ ದಿನ ಕಟಾವಾಗುವುದಿಲ್ಲ. ಕಟಾವು ತಂಡಗಳು, ವಾಹನಗಳು, ಕಾರ್ಖಾನೆಯ ನುರಿಸುವ ಸಾಮರ್ಥ್ಯ ಮತ್ತು ನಿಗದಿತ ಸರದಿಗೆ ಅನುಗುಣವಾಗಿ ಕಬ್ಬು ಸಾಗಿಸಬೇಕಾಗುತ್ತದೆ.
ಆದ್ದರಿಂದ ಕಾರ್ಖಾನೆ ಆರಂಭದ ದಿನಾಂಕದ ಜತೆಗೆ ರೈತನಿಗೆ ತನ್ನ ಕಬ್ಬಿನ ಕಟಾವು ಯಾವಾಗ ಎಂಬ ಸ್ಪಷ್ಟತೆಯೂ ಸಿಗಬೇಕು. ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ನೋಂದಾಯಿತ ಕಬ್ಬು, ಕಟಾವಿನ ಸರದಿ ಮತ್ತು ಸಾಗಣೆ ವೇಳಾಪಟ್ಟಿಯನ್ನು ಪ್ರಕಟಿಸಬೇಕು.
ಸರ್ಕಾರ ತೀರ್ಮಾನಿಸಲಿ- ರೈತನ ಹಕ್ಕು ಉಳಿಯಲಿ: ದರದ ಬಗ್ಗೆ ಸ್ಪಷ್ಟತೆ ನೀಡುವುದು ಸರ್ಕಾರ ಮತ್ತು ಕಾರ್ಖಾನೆಗಳ ಪ್ರಮುಖ ಹೊಣೆ. ಮಾತುಕತೆ ಅನಿರ್ದಿಷ್ಟವಾಗಿ ಮುಂದುವರಿದರೆ, ತುರ್ತು ಕಟಾವು ಅಗತ್ಯವಿರುವ ರೈತ ಏನು ಮಾಡಬೇಕು ಎಂಬುದಕ್ಕೂ ಅವು ಉತ್ತರಿಸಬೇಕು. ರೈತ ಸಂಘಟನೆಗಳ ಹೋರಾಟದ ಕಾರ್ಯತಂತ್ರದಲ್ಲಿಯೂ ಇಂತಹ ಬೆಳೆಗಾರರಿಗೆ ಪರಿಹಾರದ ಅವಕಾಶ ಇರಬೇಕು.
ಅಂತಿಮ ದರದ ಮಾತುಕತೆ ಮುಂದುವರಿದಿರುವಾಗಲೇ ತುರ್ತು ಕಟಾವಿಗೆ ಮಧ್ಯಂತರ ವ್ಯವಸ್ಥೆ ರೂಪಿಸುವುದಾದರೆ, ರೈತನಿಗೆ ನಂತರ ನಿಗದಿಯಾಗುವ ದರದ ವ್ಯತ್ಯಾಸ ಪಾವತಿಸುವ ಲಿಖಿತ ಬದ್ಧತೆ ಇರಬೇಕು. ಖರೀದಿ ಷರತ್ತು, ಕಟಾವು-ಸಾಗಣೆ ಕಡಿತ ಮತ್ತು ಪಾವತಿಯ ಕಾಲಮಿತಿ ಸ್ಪಷ್ಟವಾಗಬೇಕು. ಸಂಕಷ್ಟದಲ್ಲಿ ಕಬ್ಬು ನೀಡುವ ರೈತ ತನ್ನ ಹಕ್ಕನ್ನೇ ಕಳೆದುಕೊಳ್ಳುವಂತಾಗಬಾರದು.
ನಷ್ಟದ ಹೊಣೆ ನಿರ್ಧರಿಸಲು ದಾಖಲೆ ಬೇಕು: ಜಿಲ್ಲಾಡಳಿತ, ಕೃಷಿ ಇಲಾಖೆ ಮತ್ತು ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಅಪಾಯದಲ್ಲಿರುವ ಬೆಳೆಯ ಜಂಟಿ ಪರಿಶೀಲನೆ ನಡೆಸಿ, ಹಾನಿಯ ದಾಖಲಾತಿ ಹಾಗೂ ಪರಿಹಾರದ ಮಾನದಂಡ ರೂಪಿಸಬೇಕಿದೆ. ದರ ನಿಗದಿಗೆ ಕಾಲಮಿತಿ ಇರುವಂತೆಯೇ ಬೆಳೆ ಉಳಿಸುವ ಕ್ರಮಕ್ಕೂ ಗಡುವು ಬೇಕು. ಬೆಲೆಗಾಗಿ ನಡೆಯುವ ಹೋರಾಟದ ಜತೆಗೆ, ಹೊಲದಲ್ಲಿರುವ ಕಬ್ಬನ್ನು ಉಳಿಸುವ ಹೊಣೆಯನ್ನೂ ವ್ಯವಸ್ಥೆ ಹೊತ್ತುಕೊಳ್ಳಬೇಕು.




















