ಹಾವೇರಿ: ಸತ್ತಿದ್ದಾಳೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮಹಿಳೆಯೊಬ್ಬಳು ಜೀವಂತವಾಗಿರುವುದು ಗೊತ್ತಾಗಿ ಕುಟುಂಬಸ್ಥರು ಅಚ್ಚರಿಗೊಳಗಾದ ಘಟನೆ ಹಿರೇಕೆರೂರ ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದೆ.
ವೈದ್ಯರ ಸಮಯಪ್ರಜ್ಞೆಯಿಂದ ರೇಣುಕಮ್ಮ ಸಂಕೊಳ್ಳಿ (63) ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೇಣುಕಮ್ಮ ಸೋಮವಾರ ರಾತ್ರಿ ತೀವ್ರ ಅಸ್ವಸ್ಥರಾಗಿದ್ದರು. ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ತೀವ್ರ ಏರುಪೇರಾಗಿದ್ದರಿಂದ ಪ್ರಜ್ಞಾಹೀನರಾಗಿದ್ದರು. ಕುಟುಂಬಸ್ಥರು ಅವರನ್ನು ಗ್ರಾಮದ ಸ್ಥಳೀಯ ವೈದ್ಯರ ಬಳಿ ಕರೆದೊಯ್ದಿದ್ದರು. ಈ ವೇಳೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಉಸಿರಾಟವೂ ಕ್ಷೀಣಿಸಿತ್ತು.
ರೇಣುಕಮ್ಮ ಮೃತಪಟ್ಟಿದ್ದಾರೆಂದು ಭಾವಿಸಿದ ಕುಟುಂಬಸ್ಥರು ಸಂಬಂಧಿಕರಿಗೆ ಮಾಹಿತಿ ನೀಡಿ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದ್ದರು. ಕೆಲ ಸಂಬಂಧಿಕರು ಅಂತಿಮ ದರ್ಶನಕ್ಕಾಗಿ ಹೂವಿನ ಹಾರಗಳೊಂದಿಗೆ ಆಗಮಿಸಿದ್ದರು.
ಅಂತ್ಯಕ್ರಿಯೆಯ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ರೇಣುಕಮ್ಮ ಅವರ ಎದೆಯ ಭಾಗದಲ್ಲಿ ಉಸಿರಾಟದ ಚಲನೆ ಕಂಡುಬಂದಿದೆ. ಇದರಿಂದ ಕುಟುಂಬಸ್ಥರು ತಕ್ಷಣ ಅವರನ್ನು ಹಿರೇಕೆರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದು, ರೇಣುಕಮ್ಮ ಚಿಕಿತ್ಸೆಗೆ ಸ್ಪಂದಿಸಿದ್ದಾರೆ.
ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ರೇಣುಕಮ್ಮ ಅವರು ಚೇತರಿಸಿಕೊಂಡಿರುವುದು ಕುಟುಂಬಸ್ಥರಿಗೆ ನೆಮ್ಮದಿ ತಂದಿದೆ.






















