ಹುಬ್ಬಳ್ಳಿ: ರಾಜ್ಯದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾಮಾನ್ಯ ಜನರ ತುತ್ತು ಅನ್ನಕ್ಕೂ ಯೋಚಿಸುವಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಕರ್ನಾಟಕದಲ್ಲಿ ಜೂನ್ನಲ್ಲಿ ₹50ರ ಅಸುಪಾಸಿನಲ್ಲಿ ಇದ್ದ ಅಕ್ಕಿಯ ಬೆಲೆ ದಿಢೀರ್ 30 ಪ್ರತಿಶತದಷ್ಟು ಏರಿಕೆ ಕಂಡಿದೆ.
ಮುಂಗಾರು ಮಳೆಯ ಕೊರತೆ ಒಂದಡೆಯಾದರೆ, ಜಲಾಶಯಗಳಲ್ಲಿ ನೀರಿನ ಲಭ್ಯತೆ ಕುಸಿತ ಹಾಗೂ ಭತ್ತದ ಬಿತ್ತನೆ ಪ್ರದೇಶ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಅಕ್ಕಿ ಪೂರೈಕೆಯ ಮೇಲೆ ನೇರ ಪರಿಣಾಮ ಬೀರಿದೆ.
ಇದರಿಂದಾಗಿ ಸೋನಾ ಮಸೂರಿ, ಕೋಲಂ, ಜೀರಾ ಸೇರಿದಂತೆ ಪ್ರಮುಖ ಅಕ್ಕಿ ತಳಿಗಳ ಬೆಲೆ ಏರಿಕೆಯನ್ನು ಕಂಡಿದ್ದು, ಮುಂದಿನ ದಿನಗಳಲ್ಲೂ ದರ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಉಂಟಾಗಿದೆ. ಇದರಿಂದಾಗಿ ಗ್ರಾಹಕರು ಆತಂಕ ಪಡುವಂತಾಗಿದೆ.
ಸೋನಾ ಮಸೂರಿ (ಹಳೆಯ ಅಕ್ಕಿ) ₹82–₹98 ರಷ್ಟಾಗಿದ್ದು, ಕೋಲಂ ಅಕ್ಕಿಸುಮಾರು 100 ರೂ. ಆಗಿದೆ. ಜೀರಾ ಅಕ್ಕಿ 90–115 ರೂ.ಗಳಿಗೆ ಏರಿಯಾಗಿದ್ದರೆ, ಬುಲೆಟ್ ಅಕ್ಕಿಸುಮಾರು 95 ರೂ. ಗಳಷ್ಟಾಗಿದೆ.
ಬೆಲೆ ಏರಿಕೆಗೆ ಕಾರಣ ಏನು?: ಕರ್ನಾಟಕದಲ್ಲಿ ಪ್ರಮುಖವಾಗಿ ಭತ್ತ ಬೆಳೆಯುವ ಪ್ರದೇಶಗಳಾದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಆಗದಿರುವುದು ಹಾಗೂ ನೀರಿನ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ಅಲ್ಲದೇ ಕಳೆದ ವರ್ಷಕ್ಕಿಂತಲೂ ಈ ಬಾರಿ ಭತ್ತದ ಆವಕವೂ ಕಡಿಮೆಯಾಗಿದೆ.
ಭತ್ತದ ಉತ್ಪಾದನೆ ಕಡಿಮೆಯಾದ ಕಾರಣ ಗಿರಣಿಗಳಿಗೆ ಸಿಗುವ ಕಚ್ಚಾ ಭತ್ತದ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಇದರಿಂದಾಗಿ ಗಿರಣಿಗಳಿಂದ ಸಗಟು ವ್ಯಾಪಾರಿಗಳಿಗೆ ಪೂರೈಕೆಯಾಗುವ ಅಕ್ಕಿ ಬೆಲೆ ಹೆಚ್ಚಳವಾಗಿದೆ. ಈ ವ್ಯತ್ಯಾಸ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಇನ್ನಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಡೆತ: ದಿನನಿತ್ಯದ ಬಳಕೆಯಾಗುವ ಅಕ್ಕಿ ಆಹಾರ ಪದಾರ್ಥ ಏಕಾಏಕಿ ಏರಿಕೆಯಾಗಿರುವುದು ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ಬಾರಿ ಹೊರೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜತೆಗೆ ಅಕ್ಕಿ ಖರೀಗೂ ಜನರು ಹೆಚ್ಚಿನ ಹಣ ಖರ್ಚು ಮಾಡಬೇಕಾದ ಸ್ಥಿತಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.





















