SK Home Ad
Home ನಮ್ಮ ಜಿಲ್ಲೆ ಹಾವೇರಿ ನೇಪಾಳ ಪ್ರವಾಸಕ್ಕೆ ತೆರಳಿದ್ದ ಹಾವೇರಿಯ 12 ಜನ ಸೇಫ್

ನೇಪಾಳ ಪ್ರವಾಸಕ್ಕೆ ತೆರಳಿದ್ದ ಹಾವೇರಿಯ 12 ಜನ ಸೇಫ್

0
31

ಹಾವೇರಿ: ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರಕೃತಿ ವಿಕೋಪದ ನಡುವೆಯೂ ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳಿಗೆ ಸೇರಿದ 12 ಜನರು ಸುರಕ್ಷಿತವಾಗಿದ್ದಾರೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ವ್ಯಾಪಾರಸ್ಥರು, ಗುತ್ತಿಗೆದಾರರು ಸೇರಿದಂತೆ ಆರು ಕುಟುಂಬಗಳ ಸದಸ್ಯರು ಮೂರು ದಿನಗಳ ಹಿಂದೆ ಶಿವಮೊಗ್ಗದ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯ ಮೂಲಕ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಶಿವನಗೌಡ ಹಾಗೂ ವಿನಾಯಕ ಅವರ ನೇತೃತ್ವದಲ್ಲಿ ಈ ತಂಡ ಪ್ರವಾಸ ಕೈಗೊಂಡಿತ್ತು.

ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಪ್ರವಾಸಿಗರು ಪೋಖರಾದಿಂದ ಸುಮಾರು 50 ಕಿ.ಮೀ. ದೂರದಲ್ಲಿದ್ದರು ಎಂದು ತಿಳಿದುಬಂದಿದೆ. ಸದ್ಯ ಎಲ್ಲ 12 ಮಂದಿ ಸುರಕ್ಷಿತ ಸ್ಥಳದಲ್ಲಿದ್ದು, ಇಂದು ಪೋಖರಾದಿಂದ ಸೋನೌಲಿ ಮಾರ್ಗವಾಗಿ ಗೋರಖ್‌ಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಸೋನೌಲಿ ಮೂಲಕ ಭಾರತ ಪ್ರವೇಶಿಸಿದ ಬಳಿಕ ಅಲ್ಲಿಂದ ಕರ್ನಾಟಕಕ್ಕೆ ಮರಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾಸದಲ್ಲಿರುವ ಕನ್ನಡಿಗರು ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ನೇಪಾಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ರಟ್ಟಿಹಳ್ಳಿಯಲ್ಲಿರುವ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿತ್ತು. ಆದರೆ, ಪ್ರವಾಸದಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶೀಘ್ರದಲ್ಲೇ ಎಲ್ಲರೂ ಸುರಕ್ಷಿತವಾಗಿ ತಮ್ಮ ಊರಿಗೆ ಮರಳುವ ವಿಶ್ವಾಸವನ್ನು ಕುಟುಂಬಸ್ಥರು ಹಾಗೂ ಪ್ರವಾಸಿಗರು ವ್ಯಕ್ತಪಡಿಸಿದ್ದಾರೆ.