ಕಬ್ಬಿನ ಎಂಆರ್ಪಿ ನಿರ್ಧರಿಸುವ ಅಧಿಕಾರ ಕೇಂದ್ರಕ್ಕಿದೆ; ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಭರವಸೆ
ಹಾವೇರಿ: ಕಬ್ಬಿನ ಬೆಲೆ ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಕಬ್ಬಿನಲ್ಲಿರುವ ಸಕ್ಕರೆಯ ಸರಾಸರಿ ಇಳುವರಿಯನ್ನು ಆಧರಿಸಿ ಬೆಲೆ ನಿರ್ಧರಿಸಲಾಗುತ್ತದೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆದ ಬಳಿಕ ದೆಹಲಿಯಲ್ಲಿ ಸಭೆ ನಡೆಸಲಾಗಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಚವ್ಹಾಣ್ ನೇತೃತ್ವದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ರೈತರೊಂದಿಗೆ ಚರ್ಚೆ ನಡೆಸಲಾಗಿದ್ದು, ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ತಾವು ಹಾಗೂ ಸಚಿವರಾದ ಸವದಿ ಮತ್ತು ನರೇಂದ್ರಸ್ವಾಮಿ ಭಾಗವಹಿಸಿದ್ದಾಗಿ ತಿಳಿಸಿದರು.
ಸಭೆಯಲ್ಲಿ ಕಬ್ಬಿನ ಬೆಲೆ ನಿಗದಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದೆ. ಕಬ್ಬಿನ ಬೆಲೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ, ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಕಬ್ಬಿನಲ್ಲಿನ ಸಕ್ಕರೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಿ, ಒಂದು ಭಾಗವನ್ನು ಬ್ರೌನ್ ಶುಗರ್ ತಯಾರಿಕೆಗೆ ಹಾಗೂ ಮತ್ತೊಂದು ಭಾಗವನ್ನು ಜನಸಾಮಾನ್ಯರ ಬಳಕೆಗೆ ಮೀಸಲಿಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಆದರೆ, ಸಮಿತಿ ರಚಿಸಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವ ಕೇಂದ್ರದ ಪ್ರಸ್ತಾಪಕ್ಕೆ ರೈತರು ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಿದರು.
ಕಬ್ಬು ಬೆಳೆದು 12 ತಿಂಗಳು ಕಳೆದ ಬಳಿಕ ಉತ್ತಮ ಇಳುವರಿ ಬರುತ್ತದೆ. ಆದರೆ, ಪ್ರದೇಶದಿಂದ ಪ್ರದೇಶಕ್ಕೆ ಸಕ್ಕರೆಯ ಇಳುವರಿಯಲ್ಲಿ ವ್ಯತ್ಯಾಸವಿರುವುದರಿಂದ ಬೆಲೆ ನಿರ್ಧಾರ ಸಂಕೀರ್ಣವಾಗಿದೆ. ರೈತರ ಕೆಲವು ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗಬಹುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಸಮಿತಿ ವರದಿ ಬಂದ ಬಳಿಕ ಮತ್ತೊಂದು ಸಭೆ ನಡೆಸುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಸಚಿವರು ವಿವರಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ದೇಶಾದ್ಯಂತ ಇರುವುದರಿಂದ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ರುದ್ರಪ್ಪ ಲಮಾಣಿ ಹೇಳಿದರು.
- ಲಕ್ಷ್ಮೇಶ್ವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ: 85 ಲಕ್ಷ ರೂ.ಗೂ ಅಧಿಕ ನಷ್ಟ
- ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ: ಜನರ ಕಣ್ಣೀರು ಒರೆಸಲು ಕಿವಿಮಾತು
- ಕಬ್ಬಿನ ಬೆಲೆ ನಿಗದಿಯಲ್ಲಿ ರಾಜ್ಯದ ಪಾತ್ರವಿಲ್ಲ: ರುದ್ರಪ್ಪ ಲಮಾಣಿ
- ಧಾರವಾಡ ಬೈಪಾಸ್ನಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟ: ಶ್ರೀಗಳ ಬೆಂಬಲದ ಬೆನ್ನಲ್ಲೇ ಹರಿದುಬಂದ ರೈತರ ದಂಡು!
- ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ತ್ಯಜಿಸುವೆ: ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ






















