Home Advertisement
Home ಸುದ್ದಿ ರಾಜ್ಯ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮನೆ ಸೇರಿ 17 ಕಡೆ ED ದಾಳಿ

ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮನೆ ಸೇರಿ 17 ಕಡೆ ED ದಾಳಿ

0
118

ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್‌ ಅವರಿಗೆ ಬೆಳ್ಳಂಬೆಳಗ್ಗೆ ಇ.ಡಿ (E.D) ಶಾಕ್ ನೀಡಿದ್ದು, ಅವರ ನಿವಾಸ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಬೆಂಗಳೂರಿನ ಗರುಡಾ ಮಾಲ್ ಹಿಂಭಾಗದಲ್ಲಿರುವ ಹ್ಯಾರಿಸ್ ಅವರ ಮನೆ ಸೇರಿದಂತೆ ವಿವಿಧ ಆಸ್ತಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಇದೇ ವೇಳೆ, ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ.

ಈ ದಾಳಿ ಬಹುಚರ್ಚಿತ Bitcoin scam ಪ್ರಕರಣಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟ ಹ್ಯಾಕರ್ ಶ್ರೀಕಿ ಜೊತೆಗೆ ಆರ್ಥಿಕ ವ್ಯವಹಾರ ನಡೆಸಿದ ಆರೋಪದ ಹಿನ್ನೆಲೆ ಇ.ಡಿ ತನಿಖೆ ವೇಗ ಪಡೆದುಕೊಂಡಿದೆ.

ಮೂಲಗಳ ಪ್ರಕಾರ, ಮೊಹಮ್ಮದ್ ನಲಪಾಡ್ ಹಾಗೂ ಶ್ರೀಕಿ ನಡುವೆ ಸುಮಾರು 6 ವರ್ಷಗಳ ಕಾಲ ಆರ್ಥಿಕ ಸಂಪರ್ಕವಿದ್ದು, 4.5 ಕೋಟಿ ರೂ. ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಶ್ರೀಕಿ ಬಂಧನದೊಂದಿಗೆ ಪ್ರಕರಣ ತಣ್ಣಗಾಗಿದ್ದರೂ, ಇದೀಗ ಮತ್ತೆ ಇ.ಡಿ ದಾಳಿ ನಡೆಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕೆಲವು ರಾಜಕೀಯ ಮುಖಂಡರ ಹೆಸರುಗಳು ಕೂಡ ಈ ಪ್ರಕರಣದಲ್ಲಿ ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ತನಿಖೆ ಮತ್ತಷ್ಟು ವಿಸ್ತಾರವಾಗುವ ಸಾಧ್ಯತೆ ಇದೆ.

ಕೇಂದ್ರ ಭದ್ರತಾ ಪಡೆಗಳ ಸಮ್ಮುಖದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆದಿರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಸೂಚಿಸಿವೆ.