ಕಬ್ಬಿನ ದರ ವಿಚಾರದಲ್ಲಿ ಕೇಂದ್ರದ ಜವಾಬ್ದಾರಿ ಹೆಚ್ಚಿದೆ; ರೈತರ ಪರವಾಗಿ ಮತ್ತೆ ಸಿಎಂ ಭೇಟಿ: ಸಕ್ಕರೆ ಸಚಿವ
ಹಾವೇರಿ: ಕಬ್ಬಿಗೆ ದರ ನಿಗದಿ ಮಾಡುವ ಅಧಿಕಾರ ನನ್ನ ವ್ಯಾಪ್ತಿಯಲ್ಲಿಲ್ಲ. ಆದರೂ ರೈತರಿಗೆ ಸೂಕ್ತ ದರ ಕೊಡಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ. ರೈತರ ಸಮಸ್ಯೆ ಪರಿಹಾರಕ್ಕೆ ನಾಳೆ ಮುಖ್ಯಮಂತ್ರಿ ಅವರನ್ನು ಮತ್ತೊಮ್ಮೆ ಭೇಟಿಯಾಗಿ ಚರ್ಚಿಸುವುದಾಗಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ದರ ನಿಗದಿ ವಿಚಾರವಾಗಿ ರೈತ ಮುಖಂಡರು, ಮುಖ್ಯಮಂತ್ರಿ ಹಾಗೂ ಸಚಿವರು ಸೇರಿದಂತೆ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರಕಾರದೊಂದಿಗೆ ಚರ್ಚಿಸಿದೆ. ಎಫ್ಆರ್ಪಿ ಮತ್ತು ಎಂಎಸ್ಪಿ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತವೆ. ರಿಕವರಿ ಆಧಾರದ ಮೇಲೆ ದರ ನೀಡುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಕಡಿಮೆ ರಿಕವರಿ ಇದ್ದರೂ ಕಲಬುರಗಿಯ ಕಾರ್ಖಾನೆಯವರು ₹3,600 ದರ ನೀಡುತ್ತಿರುವುದು ಶ್ಲಾಘನೀಯ. ರೈತರ ಹಿತದೃಷ್ಟಿಯಿಂದ ಅವರು ಹೆಚ್ಚಿನ ದರ ನೀಡಿರಬಹುದು. ಅವರಿಗೆ ಸಕ್ಕರೆ ಸಚಿವನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕರೆದು ಮಾತನಾಡಿದ್ದೇನೆ. ಸಾಧ್ಯವಾದಷ್ಟು ಹೆಚ್ಚಿನ ದರ ನೀಡುವಂತೆ ಮನವಿ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೂ ಈ ಕುರಿತು ಕಾರ್ಖಾನೆಗಳೊಂದಿಗೆ ಚರ್ಚಿಸಿ ದರ ಕೊಡಿಸುವಂತೆ ತಿಳಿಸಿದ್ದೇನೆ. ಆದರೆ ಕಾರ್ಖಾನೆ ಮಾಲೀಕರು ನಷ್ಟದ ಕಾರಣ ನೀಡಿ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಾರ್ಖಾನೆಯವರು ದರ ನೀಡುವುದಿಲ್ಲ ಎಂದರೆ, ರೈತರನ್ನು ಕೈಬಿಡಲು ಸಾಧ್ಯವಿಲ್ಲ. ಇಬ್ಬರ ನಡುವೆ ಸಮನ್ವಯ ಸಾಧಿಸುವುದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.
ಕಾರ್ಖಾನೆ ಮಾಲೀಕರು ಸಭೆಗೆ ಬಂದರೆ ರೈತರು ಸಮಾಧಾನದಿಂದ ಚರ್ಚಿಸುವ ಪರಿಸ್ಥಿತಿ ಇರುವುದಿಲ್ಲ. ಪರಸ್ಪರ ಘರ್ಷಣೆ ಉಂಟಾಗಬಾರದು ಎಂಬ ಕಾರಣಕ್ಕೆ ಅವರು ಸಭೆಗೆ ಬಂದಿಲ್ಲ. ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿರುವ ರೈತರಿಗೆ ಹೆಚ್ಚಿನ ದರ ನೀಡುವಂತೆ ಕಾರ್ಖಾನೆಗಳ ಮಾಲೀಕರಲ್ಲಿ ಮನವಿ ಮಾಡಬೇಕಿದೆ. ದರ ನಿಗದಿ ನನ್ನ ಕೈಯಲ್ಲಿದ್ದರೆ ಕೇವಲ ಐದು ನಿಮಿಷದಲ್ಲಿ ಸಮಸ್ಯೆ ಬಗೆಹರಿಸುತ್ತಿದ್ದೆ ಎಂದರು.
ಕಬ್ಬಿನ ವಿಚಾರದಲ್ಲಿ ಕೇಂದ್ರ ಸರಕಾರದ ಜವಾಬ್ದಾರಿ ಹೆಚ್ಚಿದೆ. ಕೇಂದ್ರ ಸರಕಾರ ಈ ಬಗ್ಗೆ ಏಕೆ ನಿರ್ಧಾರ ಕೈಗೊಳ್ಳುತ್ತಿಲ್ಲ? ಸಂಸದರು ರೈತರ ಮತ ಪಡೆದು ಆಯ್ಕೆಯಾಗಿಲ್ಲವೇ? ರೈತರ ಸಮಸ್ಯೆ ಕುರಿತು ಕೇಂದ್ರ ಸರಕಾರದ ಗಮನ ಸೆಳೆಯಬೇಕಿದೆ. ನಾವು ದೆಹಲಿಗೆ ತೆರಳಿ ನಮ್ಮ ಬೇಡಿಕೆಗಳನ್ನು ಸಮಾಧಾನದಿಂದ ಮಂಡಿಸಿ ಬಂದಿದ್ದೇವೆ. ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದರ ಜತೆಗೆ ಸಚಿವ ಸಂಪುಟ ಸಭೆಯಲ್ಲಿಯೂ ಕಬ್ಬು ಬೆಳೆಗಾರರ ಸಮಸ್ಯೆ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.
ರೈತರು ಧರಣಿ ನಡೆಸುವುದು ಅವರ ಹಕ್ಕು. ಧರಣಿ ಕೂರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ರೈತರ ಕಬ್ಬು ಬೆಂಕಿಗೆ ಆಹುತಿಯಾಗಿರುವುದು ಸೇರಿದಂತೆ ಅವರ ಸಂಕಷ್ಟಗಳ ಅರಿವು ನನಗಿದೆ. ನಾನೂ ಒಬ್ಬ ರೈತನಾಗಿದ್ದು, ನನ್ನ 16 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದೇನೆ. ನಮ್ಮ ರೈತರು ಕಬ್ಬು ಕಳುಹಿಸುವ ಕಾರ್ಖಾನೆಗಳಿಗೇ ನಾನೂ ಕಬ್ಬು ಕಳುಹಿಸುತ್ತೇನೆ. ಸಕ್ಕರೆ ಸಚಿವನಾಗಿ ಇಡೀ ರಾಜ್ಯದ ಜವಾಬ್ದಾರಿ ನನ್ನ ಮೇಲಿದೆ. ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
- ಕಬ್ಬಿನ ದರ ನಿಗದಿ ನನ್ನ ವ್ಯಾಪ್ತಿಯಲ್ಲಿಲ್ಲ: ರೈತರ ಸಮಸ್ಯೆ ಬಗೆಹರಿಸಲು ಸಿಎಂ ಭೇಟಿ
- ಭದ್ರಾ ನೀರು ಹಂಚಿಕೆ ವಿವಾದ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಡಿ.ಜಿ. ಶಾಂತನಗೌಡ ಘೋಷಣೆ
- ಮೊದಲ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಸಮ್ಮೇಳನಕ್ಕೆ ಚಾಲನೆ
- ಮರುಕಳಿಸಿದ ONGC ಅನಿಲ ಸೋರಿಕೆ ಅವಘಡ: 800 ಜನರ ಸ್ಥಳಾಂತರ
- ಭದ್ರಾ ನಾಲೆಗಳಿಗೆ ನೀರು ಬಿಡುಗಡೆ ಆದೇಶಕ್ಕೆ ರೈತರ ಆಕ್ರೋಶ; ಸಚಿವರ ಮನೆ ಮುತ್ತಿಗೆಗೆ ಯತ್ನ






















