ಹಾವೇರಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ಅವರ ಎಐ ವಿಡಿಯೋ ಬಳಸಿ ಹಣದ ಹೂಡಿಕೆ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ಸುಮಾರು 20.87 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಮಹಿಳೆಯೊಬ್ಬರಿಗೆ ವಂಚನೆಯಾಗಿದ್ದು, ಅವರ ಪರವಾಗಿ ಪತಿಯು ದೂರು ನೀಡಿದ್ದಾರೆ. ದಾಖಲೆಗಳನ್ನು ಆಧರಿಸಿ, ಆರೋಪಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಿಯಾಂಕಾ ಗಾಂಧಿ ಅವರ ಎಐ ವಿಡಿಯೋ ಸೃಷ್ಟಿಸುವ ಆರೋಪಿಗಳು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಅದನ್ನು ನಿಜವೆಂದು ನಂಬಿ ದೂರುದಾರರು, ಹಣ ಹೂಡಿಕೆ ಮಾಡಿದ್ದಾರೆ. ಈ ಹಣದ ಸಮೇತ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಪ್ರಕರಣದ ವಿವರ: ದೂರುದಾರ ಮಹಿಳೆಯು ಮಾರ್ಚ್ 28 ರಿಂದ ಆಗಸ್ಟ್ 8ರ ನಡುವಿನ ಅವಧಿಯಲ್ಲಿ ಪತಿಯ ಮೊಬೈಲ್ಗೆ ಫೇಸ್ಬುಕ್ ಆಪ್ ವಿಡಿಯೋ ಮೂಲಕ ಬಿಎಕ್ಸ್ಬಿ ಟ್ರೇಡಿಂಗ್ ಮಾರ್ಕೆಟ್ ಹೆಸರಿನಲ್ಲಿ ಎಫ್ಐಆರ್ ವಿಡಿಯೋ ಜಾಹೀರಾತು ಬಂದಿತ್ತು. ಅದೇ ವಿಡಿಯೋದಲ್ಲಿ, ನಿರ್ಮಲಾ ಸೀತಾರಾಮನ್ ಹಾಗೂ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ. `ನಾನು ಇದೇ ಆಪ್ನಲ್ಲಿ ತಿಂಗಳಿಗೆ 22 ಸಾವಿರ ರೂ. ಹೂಡಿಕೆ ಮಾಡಿದ್ದೇನೆ. ಈಗ ನನ್ನ ಖಾತೆಯಲ್ಲಿ 25 ಲಕ್ಷ ರೂ. ಲಾಭವಿದೆ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಡಿಯೋ ನಿಜವೆಂದು ನಂಬಿದ ಮಹಿಳೆ, ಜಾಹೀರಾತಿನಲ್ಲಿದ್ದ ಆರೋಪಿಗಳ ಮೊಬೈಲ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಲಾಭ ಪಡೆಯಬಹುದು ಎಂದು ಆರೋಪಿಗಳು ಹೇಳಿದ್ದಾರೆ. ಅವರನ್ನೂ ನಂಬಿದ ಮಹಿಳೆ, ಆರೋಪಿಗಳು ಕಳುಹಿಸಿದ ಲಿಂಕ್ ಬಳಸಿ ನೋಂದಣಿ ಮಾಡಿಕೊಂಡಿದ್ದಾರೆ. ನಂತರ, ಆರ್ಟಿಜಿಎಸ್ ಹಾಗೂ ಎಂಪಿಎಸ್ ಮೂಲಕ ಹಂತ ಹಂತವಾಗಿ 22.87 ಲಕ್ಷ ರೂ.ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಹಾವೇರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















