SK Home Ad
Home ನಮ್ಮ ಜಿಲ್ಲೆ ಬೆಂಗಳೂರು ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ

ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ

0
40

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನ ತೆರವಾದ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಲಾಗಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ಅವರು ಆ. 7ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಸಭಾಪತಿ ಸ್ಥಾನ ಖಾಲಿಯಾಗಿದೆ ಎಂದು ವಿಧಾನಪರಿಷತ್ ಪ್ರಭಾರ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದರು.

ನೂತನ ಸಭಾಪತಿ ಆಯ್ಕೆಯಾಗುವವರೆಗೆ ಸಭಾಪತಿ ಸ್ಥಾನದ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಪುಟ್ಟಣ್ಣ ಅವರನ್ನು ನೇಮಿಸಬೇಕು ಎಂದು ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಆ. 7ರಿಂದಲೇ ಜಾರಿಗೆ ಬರುವಂತೆ ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಲಾಗಿದೆ.

ಸಲೀಂ ಅಹಮದ್, ಉಮಾಶ್ರೀಗೆ ಸ್ಥಾನ: ಇದರ ನಡುವೆ ವಿಧಾನಪರಿಷತ್‌ನ ಮುಂದಿನ ಸಭಾಪತಿ ಹಾಗೂ ಉಪಸಭಾಪತಿ ಆಯ್ಕೆ ಕುರಿತ ಚರ್ಚೆಯೂ ತೀವ್ರಗೊಂಡಿದೆ. ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಹಾಗೂ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ.

ವಿಧಾನಪರಿಷತ್‌ನ ಒಟ್ಟು 75 ಸದಸ್ಯ ಬಲದ ಪೈಕಿ ಸದ್ಯ 70 ಸ್ಥಾನಗಳು ಅಸ್ತಿತ್ವದಲ್ಲಿವೆ. ಸಭಾಪತಿ ಸ್ಥಾನ ಹೊರತುಪಡಿಸಿ ಕಾಂಗ್ರೆಸ್ 39 ಸದಸ್ಯರನ್ನು ಹೊಂದಿದ್ದರೆ, ಬಿಜೆಪಿಗೆ 24, ಜೆಡಿಎಸ್‌ಗೆ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಪರಿಷತ್‌ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದ ಸಂಖ್ಯಾಬಲ ಹೊಂದಿರುವ ಹಿನ್ನೆಲೆಯಲ್ಲಿ ಸಲೀಂ ಅಹಮದ್ ಅವರನ್ನು ಸಭಾಪತಿಯಾಗಿ ಹಾಗೂ ಉಮಾಶ್ರೀ ಅವರನ್ನು ಉಪಸಭಾಪತಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಬಹುತೇಕ ಸುಗಮವಾಗಲಿದೆ.