AI ತಂತ್ರಜ್ಞಾನದಲ್ಲಿ ಮೂಡಿಬರಲಿದೆ ಶ್ರೀಲ ಪ್ರಭುಪಾದರ ಜೀವನಚರಿತ್ರೆ: ಗಮನ ಸೆಳೆದ ಹೊಂಬಾಳೆಯ ‘ಶರಣಾಗತಿ’ ಟೀಸರ್
ಬೆಂಗಳೂರು: ಭಾರತೀಯ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಇಸ್ಕಾನ್ ಸಂಸ್ಥೆಯ ಸಂಸ್ಥಾಪಕ ಆಚಾರ್ಯರಾದ ಎ.ಸಿ. ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿದ ‘ಶರಣಾಗತಿ – ದಿ ಲೈಫ್ ಆಫ್ ಎ ಸರಂಡರ್ಡ್ ಸೋಲ್’ ಚಿತ್ರದ ಟೈಟಲ್ ಟೀಸರ್ ಅನ್ನು ನವೆಂಬರ್ 10ರಂದು ಬಿಡುಗಡೆ ಮಾಡಲಾಗಿದೆ.
ಟೀಸರ್ ಮೂಲಕ ಚಿತ್ರದ ಶೀರ್ಷಿಕೆ ಹಾಗೂ ಆಧ್ಯಾತ್ಮಿಕ ಕಥಾವಸ್ತುವಿನ ಸುಳಿವು ನೀಡಿರುವ ಹೊಂಬಾಳೆ ಫಿಲ್ಮ್ಸ್, ಈ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಯೋಜನೆ ಹೊಂದಿದೆ. ಟ್ರಾನ್ಸೆಂಡೆಂಟಲ್ ಫಿಲ್ಮ್ಸ್ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಭಕ್ತಿ, ನಂಬಿಕೆ, ಸಮರ್ಪಣೆ ಮತ್ತು ಶ್ರೀಕೃಷ್ಣನ ಸಂದೇಶವನ್ನು ಕೇಂದ್ರವಾಗಿಟ್ಟುಕೊಂಡಿದೆ.
69ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಪ್ರಭುಪಾದರು : ಶ್ರೀಲ ಪ್ರಭುಪಾದರ ಜೀವನವೇ ಈ ಚಿತ್ರದ ಪ್ರಮುಖ ಕಥಾಹಂದರ. 1896ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಅವರು, ತಮ್ಮ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರ ಮಾರ್ಗದರ್ಶನದಲ್ಲಿ ಶ್ರೀಕೃಷ್ಣನ ಭಕ್ತಿ ಮತ್ತು ಭಗವದ್ಗೀತೆಯ ಸಂದೇಶವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತಲುಪಿಸುವ ಸಂಕಲ್ಪ ಮಾಡಿದ್ದರು.
1965ರಲ್ಲಿ ತಮ್ಮ 69ನೇ ವಯಸ್ಸಿನಲ್ಲಿ ‘ಜಲದೂತ’ ಎಂಬ ಸರಕು ಸಾಗಣೆ ಹಡಗಿನಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ಆರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದರೂ ತಮ್ಮ ಉದ್ದೇಶದಿಂದ ಹಿಂದೆ ಸರಿಯಲಿಲ್ಲ. 1966ರಲ್ಲಿ ಅಮೆರಿಕದಲ್ಲಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ISKCON) ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅವರ ಬೋಧನೆಗಳು ವಿಶ್ವದ ಹಲವು ರಾಷ್ಟ್ರಗಳಿಗೆ ತಲುಪಿದವು.
AI ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದ ಬಳಕೆ : ಈ ಚಿತ್ರದ ಮತ್ತೊಂದು ವಿಶೇಷ ಆಕರ್ಷಣೆ ಕೃತಕ ಬುದ್ಧಿಮತ್ತೆ ಆಧಾರಿತ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ. ಮಾನವರ ದೇಹದ ಚಲನೆ, ಮುಖಭಾವ ಮತ್ತು ಭಂಗಿಗಳನ್ನು ಸೆರೆಹಿಡಿದು ಅವುಗಳನ್ನು ಡಿಜಿಟಲ್ ಪಾತ್ರಗಳ ಚಲನೆಗಳಾಗಿ ರೂಪಿಸುವ ಈ ತಂತ್ರಜ್ಞಾನವನ್ನು ಸಿನಿಮಾದಲ್ಲಿ ಬಳಸಲಾಗುತ್ತಿದೆ ಎಂದು ನಿರ್ಮಾಣದ ಕುರಿತ ವರದಿಗಳು ತಿಳಿಸಿವೆ.
ಸಾಂಪ್ರದಾಯಿಕ ಆಧ್ಯಾತ್ಮಿಕ ಕಥೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ. ಇದರಿಂದ ಶ್ರೀಲ ಪ್ರಭುಪಾದರ ಜೀವನದ ಪ್ರಮುಖ ಘಟನೆಗಳು ಹಾಗೂ ಅವರ ಆಧ್ಯಾತ್ಮಿಕ ಪಯಣವನ್ನು ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಮುಂದಾಗಿದೆ.
ಗೌರ ಶಕ್ತಿ ದಾಸ ನಿರ್ದೇಶನ : ಗೌರ ಶಕ್ತಿ ದಾಸ ಅವರು ಚಿತ್ರದ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜೇಶ್ ಸಿಂಗ್ ಮತ್ತು ಲೋಹಿತ್ ರಾವ್ ನಿರ್ಮಾಪಕರಾಗಿದ್ದು, ಶ್ರೀಧರ್ ಶಿಕಾರಿಪುರ ವಿಷುಯಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ರಾನ್ಸೆಂಡೆಂಟಲ್ ಫಿಲ್ಮ್ಸ್ ಮತ್ತು ಹೊಂಬಾಳೆ ಫಿಲ್ಮ್ಸ್ ಸಹಯೋಗದಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ.
ಶ್ರೀಲ ಪ್ರಭುಪಾದರ ವ್ಯಾಸಪೂಜೆಯ ಶುಭ ಸಂದರ್ಭದಲ್ಲಿ 2027ರ ಆಗಸ್ಟ್ನಲ್ಲಿ ಈ ಚಿತ್ರ ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
‘ಶರಣಾಗತಿ’ ಚಿತ್ರದ ಅಧಿಕೃತ ಟೈಟಲ್ ಟೀಸರ್.
- ಆಧ್ಯಾತ್ಮಿಕ ಕಥೆಗೆ ಆಧುನಿಕ AI ಸ್ಪರ್ಶ: ‘ಶರಣಾಗತಿ’ ಟೈಟಲ್ ಟೀಸರ್ ಬಿಡುಗಡೆ
- ಬೆಳಗಾವಿ ಅಧಿವೇಶನ 15 ರಿಂದ 20 ದಿನ ನಡೆಸಿ: ಸಿಎಂಗೆ ಹೊರಟ್ಟಿ ಪತ್ರ
- CBSE 10, 12ನೇ ತರಗತಿ ಬೋರ್ಡ್ ಪರೀಕ್ಷೆ 2027ರ ವೇಳಾಪಟ್ಟಿ ಪ್ರಕಟ
- ವಿಜ್ಞಾನದಿಂದಲೇ ಶಾಂತಿ, ಸಮೃದ್ಧಿಯ ಹಾದಿ: ಇಂದು ವಿಶ್ವ ವಿಜ್ಞಾನ ದಿನ – 2026ರ ಘೋಷವಾಕ್ಯವೇನು?
- ಸೆಹ್ವಾಗ್ ಪುತ್ರ ಆರ್ಯವೀರ್ ಅಬ್ಬರ: UAE ವಿರುದ್ಧ ಭರ್ಜರಿ ಶತಕ






















