SK Home Ad
Home ನಮ್ಮ ಜಿಲ್ಲೆ ವಿಜಯನಗರ ಅನಕ್ಷರಸ್ಥರಿಗೆ ಎಡಗೈಯಿಂದ ಅರ್ಜಿ ಬರೆದುಕೊಡುವ ಪುಣ್ಯಾತ್ಮ..

ಅನಕ್ಷರಸ್ಥರಿಗೆ ಎಡಗೈಯಿಂದ ಅರ್ಜಿ ಬರೆದುಕೊಡುವ ಪುಣ್ಯಾತ್ಮ..

0
6

ಹೊಸಪೇಟೆ: ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಜನಸಾಮಾನ್ಯರು ಅರ್ಜಿ ಸಲ್ಲಿಸುವುದೇ ದೊಡ್ಡ ಸವಾಲು. ಅದರಲ್ಲೂ ಅನಕ್ಷರಸ್ಥರಿಗೆ ಅರ್ಜಿ ತುಂಬುವುದು ಮತ್ತೊಂದು ಕಷ್ಟದ ಕೆಲಸ. ಆದರೆ ಇಲ್ಲೊಬ್ಬ ವಿಶೇಷಚೇತನ ವ್ಯಕ್ತಿ ತನ್ನದೇ ಸಂಕಷ್ಟಗಳ ನಡುವೆಯೂ ಅನಕ್ಷರಸ್ಥರಿಗೆ ಅರ್ಜಿ ಬರೆದುಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹುಟ್ಟಿನಿಂದಲೇ ಪೋಲಿಯೊ ಬಾಧಿಸಿ ಬಲಗೈ ಕಳೆದುಕೊಂಡಿದ್ದರೂ ಎಡಗೈಯಲ್ಲೇ ಬರವಣಿಗೆ ಕಲಿತು, ಇಂದು ಅನೇಕರಿಗೆ ನೆರವಾಗುತ್ತಿದ್ದಾರೆ. ಸ್ವಂತ ಮನೆಯಿಲ್ಲದೆ ವಸತಿಗಾಗಿ ಅರ್ಜಿ ಸಲ್ಲಿಸಲು ಬಂದಿದ್ದ ಈ ವ್ಯಕ್ತಿ, ಕೊನೆಗೆ ಇತರರಿಗೂ ಅರ್ಜಿ ಬರೆದುಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ಇವರೇ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ಫಕ್ಕೀರಪ್ಪ. ಇದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೊಸಪೇಟೆ ತಾಲೂಕು ಮಟ್ಟದ ಪ್ರಜಾಸೇವಾ ಅಭಿಯಾನದ ದೃಶ್ಯ. ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದ ವಿಶೇಷಚೇತನ ಫಕ್ಕೀರಪ್ಪ, ಅಲ್ಲಿದ್ದ ಅನಕ್ಷರಸ್ಥರಿಗೆ ಅರ್ಜಿ ಬರೆದುಕೊಡುತ್ತಿರುವುದು ಎಲ್ಲರ ಗಮನ ಸೆಳೆಯಿತು.

ಮೊದಲಿಗೆ ಇವರು ಯಾವುದೋ ಸರ್ಕಾರಿ ಇಲಾಖೆಯ ಸಿಬ್ಬಂದಿ ಇರಬಹುದು ಎಂದು ಜನರು ಭಾವಿಸಿದ್ದರು. ಆದರೆ ವಿಚಾರಿಸಿದಾಗ ಇವರ ಸೇವೆಯ ಹಿಂದಿನ ಬದುಕಿನ ಕಥೆ ಬಯಲಿಗೆ ಬಂದಿದೆ. ಹುಟ್ಟಿನಿಂದಲೇ ಪೋಲಿಯೊ ಬಾಧೆಯಿಂದ ಬಲಗೈ ಸ್ವಾಧೀನ ಕಳೆದುಕೊಂಡಿದ್ದರೂ ಫಕ್ಕೀರಪ್ಪ ಎದೆಗುಂದಲಿಲ್ಲ. ಎಡಗೈಯಿಂದಲೇ ಬರೆಯುವುದನ್ನು ಕಲಿತು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮರಿಯಮ್ಮನಹಳ್ಳಿ ಪುರಸಭೆ ಕಚೇರಿ ಎದುರು ಕುಳಿತು ಸಾರ್ವಜನಿಕರಿಗೆ ಅರ್ಜಿ ಬರೆದುಕೊಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ಪತ್ನಿ ಹಾಗೂ ಮೂವರು ಮಕ್ಕಳಿರುವ ಫಕ್ಕೀರಪ್ಪ, ತಮಗೆ ದೊರೆಯುವ ಅಲ್ಪಸ್ವಲ್ಪ ಆದಾಯದಲ್ಲಿಯೇ ಕುಟುಂಬ ನಿರ್ವಹಣೆ ಮಾಡುತ್ತಾ ಮಕ್ಕಳ ವಿದ್ಯಾಭ್ಯಾಸಕ್ಕೂ ಶ್ರಮಿಸುತ್ತಿದ್ದಾರೆ. ಆದರೆ ಇಂದಿಗೂ ಇವರ ಕುಟುಂಬಕ್ಕೆ ಸ್ವಂತ ಮನೆಯಿಲ್ಲ. ವಸತಿ ಸೌಲಭ್ಯಕ್ಕಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಜಾಸೇವಾ ಕಾರ್ಯಕ್ರಮಕ್ಕೆ ಆಗಮಿಸಿ ಮತ್ತೊಮ್ಮೆ ವಸತಿಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಒಂದೆಡೆ ಸರ್ಕಾರಿ ಸೌಲಭ್ಯ ಪಡೆಯಲು ಜನರೇ ಇಲ್ಲದೆ ಖಾಲಿ ಖಾಲಿಯಾಗಿ ಕಂಡುಬಂದ ಪ್ರಜಾಸೇವಾ ಕಾರ್ಯಕ್ರಮ. ಮತ್ತೊಂದೆಡೆ ತನ್ನ ಬದುಕಿನ ಸಂಕಷ್ಟಗಳ ನಡುವೆಯೂ ಇತರರಿಗೆ ನೆರವಾಗುವ ಮೂಲಕ ಮಾದರಿಯಾದ ಫಕ್ಕೀರಪ್ಪನವರ ಸೇವೆ.

ತನ್ನ ಕುಟುಂಬಕ್ಕೆ ಸೂರು ಕಲ್ಪಿಸಿಕೊಳ್ಳಲು ಹೋರಾಡುತ್ತಿರುವ ಈ ಸ್ವಾಭಿಮಾನಿ ವಿಶೇಷಚೇತನನಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ನೆರವಿನ ಹಸ್ತ ಚಾಚಬೇಕಿದೆ. ಹಲವು ವರ್ಷಗಳಿಂದ ಸ್ವಂತ ಮನೆಯ ಕನಸು ಕಾಣುತ್ತಿರುವ ಫಕ್ಕೀರಪ್ಪನ ಕುಟುಂಬಕ್ಕೆ ಒಂದು ಸೂರು ಕಲ್ಪಿಸಿಕೊಡುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕಿದೆ ಎಂಬುದು ಸಾರ್ವಜನಿಕರ ಆಶಯ.