SK Home Ad
Home ಸುದ್ದಿ ದೇಶ 13 ವರ್ಷಗಳ ದಾಂಪತ್ಯ ಅಂತ್ಯ: ಬೇರೆಯಾಗಲು ಪವನ್ ಕಲ್ಯಾಣ್ ದಂಪತಿ ನಿರ್ಧಾರ!

13 ವರ್ಷಗಳ ದಾಂಪತ್ಯ ಅಂತ್ಯ: ಬೇರೆಯಾಗಲು ಪವನ್ ಕಲ್ಯಾಣ್ ದಂಪತಿ ನಿರ್ಧಾರ!

0
41

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಬರೋಬ್ಬರಿ 13 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡಾಲಾ ಇದೀಗ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಲು ನಿರ್ಧರಿಸಿದ್ದಾರೆ.

ಈ ಕುರಿತು ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜೀವನದ ಮಹತ್ವದ ಘಟ್ಟಗಳನ್ನು ಒಟ್ಟಿಗೆ ಕಳೆದಿದ್ದೇವೆ. ಇದೀಗ ಪರಸ್ಪರ ಅರ್ಥೈಸಿಕೊಂಡು, ಗೌರವದಿಂದ ದೂರವಾಗಲು ನಿರ್ಧರಿಸಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಜವಾಬ್ದಾರಿ ಇಬ್ಬರಿಗೂ ಮುಖ್ಯ: ದಾಂಪತ್ಯ ಸಂಬಂಧ ಅಂತ್ಯಗೊಂಡರೂ ಪರಸ್ಪರ ಸ್ನೇಹಿತರಾಗಿ ಮುಂದುವರಿಯುವುದಾಗಿ ದಂಪತಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಇಬ್ಬರು ಮಕ್ಕಳ ಪೋಷಕರಾಗಿ ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ. ಮಕ್ಕಳ ಸಂತೋಷ ಮತ್ತು ಭವಿಷ್ಯವೇ ತಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ಹೇಳಿದ್ದಾರೆ.

2013ರಲ್ಲಿ ವಿವಾಹವಾಗಿದ್ದ ಜೋಡಿ: ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಪವನ್ ಕಲ್ಯಾಣ್ ಅವರು 2013ರಲ್ಲಿ ವಿವಾಹವಾಗಿದ್ದರು. ಬಳಿಕ ಅನ್ನಾ ಕೊನಿಡಾಲಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಈ ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಇದೀಗ 13 ವರ್ಷಗಳ ವೈವಾಹಿಕ ಜೀವನಕ್ಕೆ ತೆರೆ ಬಿದ್ದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಇದೇ ವೇಳೆ, ತಮ್ಮ ವೈಯಕ್ತಿಕ ಜೀವನದ ಈ ಬದಲಾವಣೆಯ ಸಂದರ್ಭದಲ್ಲಿ ಗೌಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ದಂಪತಿ ಮನವಿ ಮಾಡಿದ್ದಾರೆ. ಕಷ್ಟ-ಸುಖದ ಸಮಯದಲ್ಲಿ ಬೆಂಬಲವಾಗಿ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಆದರೆ, ಪ್ರತ್ಯೇಕವಾಗಲು ನಿರ್ಧರಿಸಿರುವುದಕ್ಕೆ ನಿರ್ದಿಷ್ಟ ಕಾರಣವೇನು ಎಂಬುದನ್ನು ದಂಪತಿ ತಮ್ಮ ಜಂಟಿ ಹೇಳಿಕೆಯಲ್ಲಿ ಬಹಿರಂಗಪಡಿಸಿಲ್ಲ.