SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವಿದ್ಯಾರ್ಥಿ ಮೇಲೆ ಅಪ್ರಾಪ್ತರ ಗುಂಪಿನಿಂದ ಹಲ್ಲೆ: ವಿಡಿಯೋ ವೈರಲ್

ವಿದ್ಯಾರ್ಥಿ ಮೇಲೆ ಅಪ್ರಾಪ್ತರ ಗುಂಪಿನಿಂದ ಹಲ್ಲೆ: ವಿಡಿಯೋ ವೈರಲ್

0
37

ದಾವಣಗೆರೆ: ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಪಿಯು ವಿದ್ಯಾರ್ಥಿಯೊಬ್ಬನನ್ನು ಅಪ್ರಾಪ್ತರ ಗುಂಪೊಂದು ರಸ್ತೆಯಲ್ಲೇ ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಟುವಳ್ಳಿ ಎಚ್‌ಕೆಆರ್ ವೃತ್ತದ ಬಳಿ ಬುಧವಾರ ಸಂಜೆ ನಡೆದಿದೆ.

ಕಾಲೇಜು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಯೊಂದಿಗೆ ಅಪ್ರಾಪ್ತರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಿಸಿ, ಬಳಿಕ ರಸ್ತೆಯ ಮಧ್ಯೆಯೇ ಅಡ್ಡಗಟ್ಟಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ವಿದ್ಯಾರ್ಥಿಯನ್ನು ಸುತ್ತುವರಿದಿದ್ದ ಗುಂಪು ಆತನೊಂದಿಗೆ ವಾಗ್ವಾದ ನಡೆಸಿ, ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ವೀಡಿಯೋ ಮಾಡುತ್ತಿರುವುದನ್ನು ಗಮನಿಸಿದ ಅಪ್ರಾಪ್ತರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ಈ ಅಪ್ರಾಪ್ತರ ಗುಂಪಿನ ನಡುವೆ ಜಗಳ ನಡೆದಿತ್ತು ಎನ್ನಲಾಗಿದ್ದು, ಅದೇ ವಿಚಾರವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ದಾವಣಗೆರೆ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಅಪ್ರಾಪ್ತರು ಎಂಬ ಕಾರಣಕ್ಕೆ ಕಾನೂನಿನ ಭಯವಿಲ್ಲದೆ ಗುಂಪು ಕಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸುವ ಪ್ರವೃತ್ತಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ವೀಡಿಯೋ ಆಧರಿಸಿ ಹಲ್ಲೆ ನಡೆಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿದೆ.