SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವಿಜಯೇಂದ್ರಗೆ ಹೃದಯವೇ ಇಲ್ಲ: ಸಿದ್ದೇಶ್ವರ್ ಆಕ್ರೋಶ

ವಿಜಯೇಂದ್ರಗೆ ಹೃದಯವೇ ಇಲ್ಲ: ಸಿದ್ದೇಶ್ವರ್ ಆಕ್ರೋಶ

0
50

ದಾವಣಗೆರೆ: ಇತ್ತೀಚೆಗೆ ಬಿಡುಗಡೆಯಾದ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಡಾ.ಜಿ.ಎಂ. ಸಿದ್ದೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನೂತನ ಜಿಲ್ಲಾ ಪದಾಧಿಕಾರಿಗಳ ಪಟ್ಟಿಯಿಂದ ಸಾಮಾನ್ಯ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಕೂಡಲೇ ಪಟ್ಟಿಯನ್ನು ಬದಲಿಸಲು ವಿಜಯೇಂದ್ರ ಅವರ ಗಮನಕ್ಕೆ ತರುತ್ತೇವೆ. ಯಾವುದೇ ಬದಲಾವಣೆ ಮಾಡದಿದ್ದರೆ ಮುಂದಿನ ನಡೆ ಬಗ್ಗೆ ಚರ್ಚಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಈ ಹಿಂದೆ ನೇಮಕ ಮಾಡಿದ್ದ ಪ್ರಧಾನ ಕಾರ್ಯದರ್ಶಿಗಳನ್ನು ಕೇವಲ ಮೂರೇ ತಿಂಗಳಲ್ಲಿ ತೆಗೆದುಹಾಕಲು ಕಾರಣ ಏನು?. ಹೀಗೆ ಮಾಡಿದರೆ ನಾವು ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಏನು ಉತ್ತರ ಕೊಡಬೇಕು? ಇದಕ್ಕೆಲ್ಲ ರಾಜ್ಯಾಧ್ಯಕ್ಷರೇ ಉತ್ತರಿಸಬೇಕೆಂದರು.

ನಾನು ಈ ಕುರಿತು ಮಾತನಾಡಲು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿದ್ದೆ. ಆದರೆ ಅವರು ʻಇವತ್ತು ಅಮಾವಾಸ್ಯೆ ಇದೆ, ಆಮೇಲೆ ಮಾತನಾಡೋಣʼ ಎಂದು ಹೇಳಿ ಫೋನ್ ಕೆಳಗಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮನ್ನು ಹಿರಿಯ ನಾಯಕರು ಎಂದು ಇಲ್ಲಿಯ ಸ್ಥಳೀಯರು ಹೇಳುತ್ತಾರಷ್ಟೇ. ಆದರೆ ರಾಜ್ಯಾಧ್ಯಕ್ಷರ ಕಣ್ಣಿಗೆ ನಾನು ಸಣ್ಣವನು, ಅಪ್ರಮುಖನಾಗಿ ಕಾಣುತ್ತಿದ್ದೇನೆ ಎಂದು ಹರಿಹಾಯ್ದರು.

ವಿಜಯೇಂದ್ರಗೆ ಹೃದಯ ಇಲ್ಲ: ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲಾ ನಾಯಕರಿಗೆ ಹೃದಯ ಇಲ್ಲ ಎಂದು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಸಿದ್ದೇಶ್ವರ್, ನಾನೇ ನೇರವಾಗಿ ಹೇಳುತ್ತೇನೆ, ಮೊದಲು ರಾಜ್ಯಾಧ್ಯಕ್ಷರಿಗೇ ಹಾರ್ಟ್ ಇಲ್ಲ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ, ಅವರೇ ಅರ್ಥ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.