SK Home Ad
Home ನಮ್ಮ ಜಿಲ್ಲೆ ದಾವಣಗೆರೆ 610 ಅಡಿಕೆ ಮರ ಕಡಿದು ನಾಶಪಡಿಸಿದ ಪ್ರಕರಣ: ಆರೋಪಿ ಬಂಧನ

610 ಅಡಿಕೆ ಮರ ಕಡಿದು ನಾಶಪಡಿಸಿದ ಪ್ರಕರಣ: ಆರೋಪಿ ಬಂಧನ

0
1

ದಾವಣಗೆರೆ: ತಾಲೂಕಿನ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 610 ಅಡಿಕೆ ಮರಗಳನ್ನು ಕಡಿದು ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಬುಳ್ಳಾಪುರ ಗ್ರಾಮದ ನಿವಾಸಿ ಕೆ.ಸಿದ್ದೇಶನಾಯ್ಕ್ ತಮ್ಮ 1 ಎಕರೆ 15 ಗುಂಟೆ ಜಮೀನಿನಲ್ಲಿ 660 ಅಡಿಕೆ ಮರಗಳನ್ನು ಬೆಳೆಸಿದ್ದರು. ಜು. 3ರ ಸಂಜೆ 7 ಗಂಟೆಯಿಂದ ಜು. 4ರ ಬೆಳಗ್ಗೆ 8.30ರ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ 660 ಮರಗಳಲ್ಲಿ 610 ಅಡಿಕೆ ಮರ ಕಡಿದು ನಾಶಪಡಿಸಿದ್ದರು. ಈ ಕೃತ್ಯದಿಂದ ಸುಮಾರು 5 ರಿಂದ 5.5 ಲಕ್ಷ ನಷ್ಟ ಉಂಟಾಗಿದೆ ಎಂದು ಅವರು ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಗ್ರಾಮಾಂತರ ಉಪವಿಭಾಗದ ಡಿಎಸ್ಪಿ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ, ಮಾಯಕೊಂಡ ವೃತ್ತದ ಸಿಪಿಐ ರಾಘವೇಂದ್ರ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಬಿ. ಅಜಯ್ ನೇತೃತ್ವದ ತಂಡ ತನಿಖೆ ನಡೆಸಿ, ಪ್ರಕರಣದ ಪ್ರಮುಖ ಆರೋಪಿಯಾದ ಕಿರಣ್ ಆರ್. (26) ಎಂಬಾತನನ್ನು ಬಂಧಿಸಿದೆ. ವಿಚಾರಣೆ ವೇಳೆ ಆರೋಪಿಯು ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನೂ ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.