SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಜೂಜಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ, 24 ಜನ ವಶಕ್ಕೆ

ದಾವಣಗೆರೆ: ಜೂಜಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ, 24 ಜನ ವಶಕ್ಕೆ

0
6

ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ, ಒಟ್ಟು 24 ಜನರನ್ನು ವಶಕ್ಕೆ ಪಡೆದು 61,100 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಡಾ‌. ಎಚ್.ಟಿ. ಶೇಖರ್ ಅವರ ನಿರ್ದೇಶನ ಹಾಗೂ ಸಂಬಂಧಿತ ಡಿವೈಎಸ್ಪಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಗಳು ನಡೆದಿವೆ. ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಕಾಕನೂರು ಸಮೀಪದ ಹಳ್ಳದ ದಡದಲ್ಲಿ ಜೂಜಾಟ ನಡೆಯುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಎಎನ್‌ಟಿಎಫ್ ತಂಡ ದಾಳಿ ನಡೆಸಿತು. ಪೊಲೀಸ್ ನಿರೀಕ್ಷಕ ಕೆ.ಟಿ. ಅಣ್ಣಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 6 ಮಂದಿಯನ್ನು ವಶಕ್ಕೆ ಪಡೆದು 46,000 ರೂ. ನಗದು ವಶಪಡಿಸಿಕೊಳ್ಳಲಾಯಿತು. ಈ ಸಂಬಂಧ ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಾಳಿಹಳ್ಳಿ–ಮುದಿಗೇರೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು 3,550 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ವೇಳೆ ಸಂತೇಬೆನ್ನೂರು ಠಾಣೆ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 6 ಮಂದಿ ಜೂಜಾಟಗಾರರನ್ನು ವಶಕ್ಕೆ ಪಡೆದು 4,150 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ, ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಸುತ್ತಿದ್ದ 8 ಮಂದಿಯನ್ನು ಬಂಧಿಸಿ 7,400 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಾರೆ ನಾಲ್ಕು ಪ್ರತ್ಯೇಕ ದಾಳಿಗಳಲ್ಲಿ 24 ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, 61,100 ರೂ. ನಗದು ವಶಪಡಿಸಿಕೊಳ್ಳಲಾಗಿದೆ.