SK Home Ad
Home ಸುದ್ದಿ ದೇಶ ಭೀಕರ ಅಪಘಾತ: ಕಾರಿನೊಳಗೆ ನುಗ್ಗಿದ ಕಬ್ಬಿಣದ ರಾಡ್, ಚಾಲಕ ಸಾವು

ಭೀಕರ ಅಪಘಾತ: ಕಾರಿನೊಳಗೆ ನುಗ್ಗಿದ ಕಬ್ಬಿಣದ ರಾಡ್, ಚಾಲಕ ಸಾವು

0
5

ಗುರುಗ್ರಾಮ್ (ಹರಿಯಾಣ) : ಹರಿಯಾಣದ ಗುರುಗ್ರಾಮ್‌ನ ದ್ವಾರಕಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ದೇಶದಾದ್ಯಂತ ಆಘಾತ ಮೂಡಿಸಿದೆ. ಬಿಳಿ ಬಣ್ಣದ ಕ್ಯಾಬ್‌ವೊಂದು ಟಿಎಂಟಿ ಕಬ್ಬಿಣದ ರಾಡ್‌ಗಳನ್ನು ತುಂಬಿಕೊಂಡಿದ್ದ ಇ-ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ರಾಡ್‌ಗಳು ಕಾರನ್ನು ಭೇದಿಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕಾರಿನ ಹಿಂಭಾಗದಲ್ಲಿ ಪ್ರಯಾಣಿಸುತ್ತಿದ್ದ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಲಿಸುವ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ನಿಧನ

ಹೇಗೆ ಸಂಭವಿಸಿತು ದುರಂತ? : ಜುಲೈ 17ರಂದು ನಡೆದ ಈ ಅಪಘಾತದಲ್ಲಿ ಕೆಂಪು ಬಣ್ಣದ ಇ-ರಿಕ್ಷಾದಲ್ಲಿ ಉದ್ದವಾದ ಟಿಎಂಟಿ ಕಬ್ಬಿಣದ ರಾಡ್‌ಗಳನ್ನು ಸಾಗಿಸಲಾಗುತ್ತಿತ್ತು. ಈ ರಾಡ್‌ಗಳು ವಾಹನದ ಹಿಂಭಾಗದಿಂದ ಬಹಳಷ್ಟು ಹೊರಗೆ ಚಾಚಿಕೊಂಡಿದ್ದವು ಎನ್ನಲಾಗಿದೆ. ಅದೇ ವೇಳೆ ವೇಗವಾಗಿ ಸಂಚರಿಸುತ್ತಿದ್ದ ಕ್ಯಾಬ್ ಇ-ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಬ್ಬಿಣದ ರಾಡ್‌ಗಳು ಕಾರಿನ ಮುಂಭಾಗವನ್ನು ಭೇದಿಸಿ ಒಳನುಗ್ಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ : ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಇ-ರಿಕ್ಷಾ ವೇಗದ ವಾಹನಗಳಿಗಾಗಿ ಮೀಸಲಾಗಿರುವ ಲೇನ್‌ನಲ್ಲಿ ಸಂಚರಿಸುತ್ತಿತ್ತು. ಇದು ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆಯ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವುಗಳಲ್ಲಿ ಹಾನಿಗೊಳಗಾದ ಕಾರು, ರಾಡ್‌ಗಳಿಂದ ತುಂಬಿದ್ದ ಇ-ರಿಕ್ಷಾ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ತುರ್ತು ಸೇವಾ ಸಿಬ್ಬಂದಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಂಟ್ವಾಳ ಯುವತಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಆರೋಪಿ ಬಂಧನ

ಪೊಲೀಸ್ ತನಿಖೆ ಆರಂಭ : ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇ-ರಿಕ್ಷಾ ಚಾಲಕ ಹಾಗೂ ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.