SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪೋಕ್ಸೋ ಪ್ರಕರಣ: ವಚನಾನಂದ ಶ್ರೀ ಜಾಮೀನು ಪ್ರಕ್ರಿಯೆ ಪೂರ್ಣ

ಪೋಕ್ಸೋ ಪ್ರಕರಣ: ವಚನಾನಂದ ಶ್ರೀ ಜಾಮೀನು ಪ್ರಕ್ರಿಯೆ ಪೂರ್ಣ

0
55

ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ನಿಯಮಿತ ಜಾಮೀನು (ರೆಗ್ಯುಲರ್ ಬೇಲ್) ಮಂಜೂರಾದ ಹಿನ್ನೆಲೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಂಗಳವಾರ ದಾವಣಗೆರೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಸ್ವಾಮೀಜಿ ಪರ ವಕೀಲ ಎಸ್.ವಿ. ಪಾಟೀಲ ಸೇರಿದಂತೆ ಹಲವು ವಕೀಲರು ಹಾಗೂ ಬೆಂಬಲಿಗರು ಈ ವೇಳೆ ಜೊತೆಯಲ್ಲಿದ್ದರು. ಸೋಮವಾರ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು ಶ್ರೀ ವಚನಾನಂದ ಸ್ವಾಮೀಜಿಗೆ ರೆಗ್ಯುಲರ್ ಬೇಲ್ ಮಂಜೂರು ಮಾಡಿ ಆದೇಶ ಹೊರಡಿಸಿತ್ತು.

ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ವಚನಾನಂದ ಸ್ವಾಮೀಜಿ, ನಾವು ಕಾನೂನನ್ನು ಗೌರವಿಸುತ್ತೇವೆ ಮತ್ತು ಪರಿಪಾಲಿಸುತ್ತೇವೆ. ಇದು ಸತ್ಯಕ್ಕೆ ಸಂದ ಜಯ ಎಂದು ಹೇಳಿದರು.

ಹರಿಹರದ ಭಕ್ತರು ಹಾಗೂ ತಮ್ಮ ಪರ ವಾದ ಮಂಡಿಸಿದ ವಕೀಲ ಎಸ್.ವಿ. ಪಾಟೀಲ ಅವರಿಗೆ ಧನ್ಯವಾದ ಸಲ್ಲಿಸಿದ ಅವರು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಟೀಕೆ-ಟಿಪ್ಪಣಿಗಳು ಸಹಜ ಎಂದು ಅಭಿಪ್ರಾಯಪಟ್ಟರು.

ಸನ್ಯಾಸತ್ವವು ಹೂವಿನ ಹಾಸಿಗೆಯಲ್ಲ, ಅದು ಅಗ್ನಿಪಥ. ಅಂತಿಮವಾಗಿ ಉಳಿಯುವುದು ಸತ್ಯ, ನ್ಯಾಯ ಮತ್ತು ಧರ್ಮ ಮಾತ್ರ. ಅದನ್ನೇ ನಾವು ಪಾಲಿಸುತ್ತೇವೆ ಎಂದು ಹೇಳಿದರು.

ಇತ್ತೀಚಿನ ಬೆಳವಣಿಗೆಗಳಿಂದ ಹರಿಹರ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದಾಗಿ ಹೇಳಿದ ಅವರು, ವಿರೋಧಿಗಳಿಗೂ ಧನ್ಯವಾದಗಳನ್ನು ಸಲ್ಲಿಸಿದರು. ನಂತರ ತಮ್ಮ ವಾಹನದತ್ತ ತೆರಳಿದ ಶ್ರೀ ವಚನಾನಂದ ಸ್ವಾಮೀಜಿ, ತಮ್ಮ ಬಳಿ ಇದ್ದ ‘ಸೈಲೆನ್ಸ್’ ಪುಸ್ತಕವನ್ನು ಪ್ರದರ್ಶಿಸಿ ಮೌನವಾಗಿ ಸ್ಥಳದಿಂದ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ವಕೀಲ ಎಸ್.ವಿ. ಪಾಟೀಲ, ಶ್ರೀಗಳ ಭಕ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.