ಬೆಳಗಾವಿ: ಆಸ್ತಿ ಹಂಚಿಕೆಯಾಗಿದ್ದ ಜಮೀನಿನ ‘ಚೆಕ್‌ಬಂದಿ’ಗೆ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ಮಂದಿ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ ಇಬ್ಬರು ಸಹೋದರರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ನುಗ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಗಮಪ್ಪ ರಾಮಣ್ಣನವರ್ (32) ಮತ್ತು ಬಸಪ್ಪ ರಾಮಣ್ಣನವರ್ (38) ಕೊಲೆಯಾದವರು. ಮನೆಯಲ್ಲಿದ್ದ ಬಾಲಕ, ಬಾಲಕಿ ಹಾಗೂ ವೃದ್ಧ ಸೇರಿದಂತೆ ಐವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಮನೆಯ ಹಿರಿಯ ಮಗ ಯಲ್ಲಪ್ಪ ಅವರಿಗೆ ಸುಮಾರು 15 ವರ್ಷಗಳ ಹಿಂದೆ ಸಂಬಂಧಿಕರ ಮಗಳಾದ ಅನವ್ವಳೊಂದಿಗೆ ಮದುವೆಯಾಗಿತ್ತು. ಮದುವೆಯಾದ ಎಂಟು ತಿಂಗಳಲ್ಲೇ ಅನವ್ವ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದರು. ಬಳಿಕ ಅನವ್ವಳ ಮಗನಿಗೆ ಕುಟುಂಬದ ಆಸ್ತಿಯಲ್ಲಿ ಪಾಲು ನೀಡುವಂತೆ ಅವರ ಕುಟುಂಬಸ್ಥರು ಒತ್ತಾಯಿಸಿದ್ದರು ಎನ್ನಲಾಗಿದೆ.
ಕುಟುಂಬದ ಒಂಬತ್ತು ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನನ್ನು ಯಲ್ಲಪ್ಪ ಮಗನ ಹೆಸರಿಗೆ ನೀಡಿದ್ದರು. ಹಂಚಿಕೆಯಾದ ಜಮೀನಿಗೆ ಚೆಕ್‌ಬಂದಿ ಹಾಕಲು ಅನವ್ವಳ ತಂದೆ, ಯಲ್ಲಪ್ಪ ಹಾಗೂ ಅವರ ಕುಟುಂಬದವರನ್ನು ಕರೆದಿದ್ದರು. ಆದರೆ, ಜಮೀನಿನ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಯಲ್ಲಪ್ಪನ ತಂದೆ ಮತ್ತು ಸಹೋದರರು ಚೆಕ್‌ಬಂದಿಗೆ ತೆರಳಿರಲಿಲ್ಲ ಎಂದು ಹೇಳಲಾಗಿದೆ.
ಇದರಿಂದ ಆಕ್ರೋಶಗೊಂಡ ಅನವ್ವಳ ಕುಟುಂಬದವರು ರಾತ್ರಿ ಒಂಬತ್ತು ಜನರೊಂದಿಗೆ ಯಲ್ಲಪ್ಪನ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂಬ ಆರೋಪವಿದೆ. ಮನೆಯ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು, ಕುಟುಂಬದ ಸದಸ್ಯರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಲಗಮಪ್ಪ ಮತ್ತು ಬಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದುಷ್ಕರ್ಮಿಗಳು ಪರಾರಿಯಾದ ಬಳಿಕ ಮನೆಯಲ್ಲಿದ್ದ 14 ವರ್ಷದ ಬಾಲಕಿ ಆಂಬುಲೆನ್ಸ್‌ಗೆ ಕರೆ ಮಾಡಿ ನೆರವು ಕೋರಿದ್ದಾಳೆ. ತನ್ನ ತಮ್ಮನೊಂದಿಗೆ ಸೇರಿ ಗಾಯಗೊಂಡ ದೊಡ್ಡಪ್ಪಂದಿರು ಮತ್ತು ಅಜ್ಜನನ್ನು ಮಧ್ಯರಾತ್ರಿಯೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾಳೆ. ಬಾಲಕಿಯ ಸಮಯಪ್ರಜ್ಞೆಯಿಂದ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ದೊರಕಿದೆ.
ಜೋಡಿ ಕೊಲೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರಮುಖ ಆರೋಪಿ ಅನವ್ವಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.





















