ದಾವಣಗೆರೆ: ನಕಲಿ ಬಂಗಾರ ನೀಡಿ ವಂಚಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ನ್ಯಾಮತಿ ಪೊಲೀಸರು, ಬಂಧಿತರಿಂದ 62.25 ಲಕ್ಷ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಸಚಿನ್ ಗೋಂಧಳಿ ಉರ್ಫ್ ಸ್ಯಾಂಡಿ ಉರ್ಫ್ ರಮೇಶ (21), ನ್ಯಾಮತಿ ತಾಲೂಕಿನ ಸಂದೀಪ (38), ರವಿ (40) ಬಂಧಿತ ಆರೋಪಿಗಳು. ಇವರಿಂದ ವಂಚನೆ ಮಾಡಿದ್ದ ಒಟ್ಟು 62,25,000 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಳೇ ಕಾಲದ ಮನೆ ಕೆಡವಿ ಪಾಯ ತೆಗೆಯುತ್ತಿರುವಾಗ ಬಂಗಾರದ ನಿಧಿ ಸಿಕ್ಕಿದ್ದು, ಕಡಿಮೆ ಬೆಲೆಗೆ ಕೊಡುವುದಾಗಿ ವಿಜಯಕುಮಾರ ಎಂಬುವರ ಮುಖಾಂತರ ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆಯ ಶಿವಾನಂದಪ್ಪಗೆ ಆರೋಪಿ ರಮೇಶ ನಂಬಿಸಿದ್ದ. ಸ್ಯಾಂಪಲ್ ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಅದು ಅಸಲಿ ಬಂಗಾರವಾಗಿತ್ತು.
ಕಳೆದ ಜೂನ್ 28 ರಂದು ಸವಳಂಗ-ಶಿಕಾರಿಪುರ ರಸ್ತೆಯ ಮಾಚಿಗೊಂಡನಹಳ್ಳಿ ಕೆರೆ ಸಮೀಪದ ತೋಟದಲ್ಲಿ ಶಿವಾನಂದಪ್ಪರನ್ನು ಭೇಟಿಯಾದ ಆರೋಪಿಗಳು 85 ಲಕ್ಷ ರೂ. ಪಡೆದು, ಕವರ್‌ನಲ್ಲಿದ್ದ ಅಂದಾಜು 1 ಕೆ.ಜಿ ಯಷ್ಟು ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಓಡಿ ಹೋಗಿದ್ದರು. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.






















